ಉತ್ತರ ಕನ್ನಡ ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-05
Posted by:  Admin

ಉತ್ತರ ಕನ್ನಡ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆ ಗೋವಾ ರಾಜ್ಯ, ಬೆಳಗಾವಿ, ಧಾರವಾಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಪಶ್ಚಿಮಕ್ಕೆ ಅರಬ್ಬೀ ಸಮುದ್ರ ವಿದೆ. ಬಹುತೇಕ ಅರಣ್ಯಪ್ರದೇಶದಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ. ವಿಶ್ವ ವಿಖ್ಯಾತ ಜೋಗ ಜಲಪಾತ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿದೆ. ಕರ್ನಾಟಕದ ಪ್ರಖ್ಯಾತ ಜಾನಪದ ಕಲೆ ಯಕ್ಷಗಾನ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಅದಲ್ಲದೇ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿ ಕರ್ನಾಟಕದ ದಾಂಡೀ ಎಂದು ಕರೆಸಿಕೊಳ್ಳೂವ ಅಂಕೋಲಾ ಕೂಡ ಈ ಜಿಲ್ಲೆಗೇ ಸೇರಿದೆ.ಇಲ್ಲಿಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧೪,೩೭,೧೬೯ ಇದ್ದು ಇದರಲ್ಲಿ ಪುರುಷರು ೭,೨೬,೨೫೬ ಹಾಗೂ ಮಹಿಳೆಯರು ೭,೧೦,೯೧೩

ತಾಲೂಕುಗಳು:
* ಅಂಕೋಲಾ
* ಭಟ್ಕಳ
* ಹಳಿಯಾಳ
* ಹೊನ್ನಾವರ
* ಜೋಯಿಡಾ
* ಕಾರವಾರ
* ಕುಮಟಾ
* ಮುಂಡಗೋಡು
* ಸಿದ್ಧಾಪುರ
* ಶಿರಸಿ
* ಯಲ್ಲಾಪುರ

ಇತಿಹಾಸ:
ಇಲ್ಲಿನ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ (ಪ್ರ.ಶ.ಪು.4-3ನೆಯ ಶತಮಾನ). ಈ ಪ್ರದೇಶ ಮೌರ್ಯ ಸಾಮ್ರಾಜ್ಯದಲ್ಲಿತ್ತೆಂದೂ ವನವಾಸಿ ಅಥವಾ ಇಂದಿನ ಬನವಾಸಿ ಮುಖ್ಯ ಸ್ಥಳವಾಗಿತ್ತೆಂದೂ ಈ ಪ್ರದೇಶಕ್ಕೆ ಬೌದ್ಧ ಭಿಕ್ಷುಗಳನ್ನು ಧರ್ಮಪ್ರಸಾರಕ್ಕಾಗಿ ಅಶೋಕನ ಕಾಲದಲ್ಲಿ ಕಳಿಸಲಾಗಿತ್ತೆಂದೂ ಮಹಾವಂಶ, ದೀಪವಂಶ ಮೊದಲಾದ ಧರ್ಮಗ್ರಂಥಗಳಿಂದ ತಿಳಿಯುತ್ತದೆ. ಮುಂದೆ ಪ್ರ.ಶ.ಪು. 2 ರಿಂದ ಪ್ರ.ಶ.3ನೆಯ ಶತಮಾನದಲ್ಲಿ ಸಾತವಾಹನರ ಆಳ್ವಿಕೆಯಲ್ಲಿ ಇತ್ತೆಂದು ಬನವಾಸಿಯ ಉತ್ಖನನಗಳಿಂದ ತಿಳಿಯುತ್ತದೆ. ಇಲ್ಲಿ ಯಜ್ಞಶಾತಕರ್ಣಿಯ ಕೆಲವು ನಾಣ್ಯಗಳು ದೊರಕಿವೆ. 2 ಮತ್ತು 3ನೆಯ ಶತಮಾನದಲ್ಲಿ ಸಾತವಾಹನರ ಸಂಬಂಧಿಗಳಾದ ಚಟುಕುಲದವರು ಇಲ್ಲಿ ಆಳುತ್ತಿದ್ದರು. 4 ರಿಂದ 6ನೆಯ ಶತಮಾನದವರೆಗೆ ಈ ಪ್ರದೇಶ ಕದಂಬರ ಆಳ್ವಿಕೆಯಲ್ಲಿತ್ತು. ಕದಂಬರ ಅನಂತರ ಬಾದಾಮಿಯ ಚಾಳುಕ್ಯರು (6-8ನೆಯ ಶತಮಾನ), ರಾಷ್ಟ್ರಕೂಟರೂ (8-10ನೆಯ ಶತಮಾನ) ಆಳಿದರು. 

ರಾಷ್ಟ್ರಕೂಟರ ಮತ್ತು ಅನಂತರ ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಈ ಜಿಲ್ಲೆಯ ಬಹುಭಾಗ ಬನವಾಸಿ  ಎಂಬ ಪ್ರಮುಖ ಪ್ರಾಂತ್ಯದ ಭಾಗವಾಗಿತ್ತು. ಅಂದಿನ ಆಳರಸರ ಪ್ರತಿನಿಧಿಗಳು ಬನವಾಸಿಯನ್ನು ತಮ್ಮ ಪ್ರಾಂತೀಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. 11 ಮತ್ತು 13ನೆಯ ಶತಮಾನಗಳಲ್ಲಿ ಹಾನಗಲ್ಲು ಮತ್ತು ಗೋವೆಯ ಕದಂಬರು ಚಾಳುಕ್ಯ ಸಾಮಂತರಾಗಿ ಹೆಚ್ಚುಮಟ್ಟಿಗೆ ಈ ಪ್ರದೇಶವನ್ನು ಆಳುತ್ತಿದ್ದರು. 14ನೆಯ ಶತಮಾನದಾರಂಭ ಸು.16ನೆಯ ಶತಮಾನದವರೆಗೆ ಈ ಜಿಲ್ಲೆಯ ಬಹುಭಾಗ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿತ್ತು. 17-18ನೆಯ ಶತಮಾನಗಳಲ್ಲಿ ಕೆಳದಿಯ ನಾಯಕರು ಮತ್ತು ಬಿಳಗಿ, ಸ್ವಾದಿ, ಗೇರುಸೊಪ್ಪೆ ಮೊದಲಾದ ಪಾಳೆಗಾರ ವಂಶದವರು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಆಳುತ್ತಿದ್ದರು. 18ನೆಯ ಶತಮಾನದ ಉತ್ತರಾರ್ಧದಲ್ಲಿ, ಉತ್ತರ ಕನ್ನಡ ಜಿಲ್ಲೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ ಭಾಗವಾಯಿತು. 1799ರಲ್ಲಿ ಶ್ರೀರಂಗಪಟ್ಟಣದ ಪತನವಾದ ಅನಂತರ ಇದು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟು ಮುಂಬಯಿ ಪ್ರಾಂತ್ಯಕ್ಕೆ ಸೇರಿತು. ಸು.150 ವರ್ಷ ಆ ಪ್ರಾಂತ್ಯದಲ್ಲಿದ್ದ ಈ ಜಿಲ್ಲೆ ಭಾಷಾನುಗುಣ ಪ್ರಾಂತರಚನೆಯ ಅನಂತರ (1956) ಕರ್ನಾಟಕ ರಾಜ್ಯಕ್ಕೆ ಸೇರಿತು.

ಸ್ವಾತಂತ್ರ್ಯಸಮರ:
1862ಕ್ಕಿಂತ ಮೊದಲು ದಕ್ಷಿಣೋತ್ತರ ಜಿಲ್ಲೆಗಳು ಬೇರೆ ಬೇರೆಯಾಗಿರಲಿಲ್ಲ. ಆಗ ಈ ಇಡೀ ಜಿಲ್ಲೆಗೆ ಕನ್ನಡ ಜಿಲ್ಲೆ ಎಂಬ ಹೆಸರಿತ್ತು. ಈ ಜಿಲ್ಲೆಯ ಒಗ್ಗಟ್ಟು ಮುಂದೆ ಬ್ರಿಟಿಷ್ ಸರ್ಕಾರಕ್ಕೆ ಮುಳುವಾಗಬಹುದೆಂಬ ಶಂಕೆಯಿಂದ ಆಗಿನ ಜಿಲ್ಲಾ ಕಲೆಕ್ಟರ್ ಮುನ್ರೂ ಎಂಬಾತ ಈ ಜಿಲ್ಲೆಯನ್ನು ಎರಡಾಗಿ ಒಡೆಯಬೇಕೆಂದು ಸಲಹೆ ಮಾಡಿದ. ಅದರಂತೆ ಉತ್ತರ ಭಾಗವನ್ನು ಉತ್ತರ ಕನ್ನಡ ಎಂದು ಹೆಸರಿಸಿ ಮುಂಬಯಿ ಪ್ರಾಂತ್ಯಕ್ಕೂ ದಕ್ಷಿಣ ಭಾಗವನ್ನು ದಕ್ಷಿಣ ಕನ್ನಡ ಜಿಲ್ಲೆ ಎಂದು ಕರೆದು ಅದನ್ನು ಮದರಾಸು ಪ್ರಾಂತ್ಯಕ್ಕೂ ಸೇರಿಸಲಾಯಿತು. 1890ರಲ್ಲಿ ಜಿಲ್ಲೆಯ ಜನರಿಂದ ಜಂಗಲ್ ಸವಲತ್ತುಗಳನ್ನು ಕಸಿದುಕೊಳ್ಳಲಾಯಿತು. 1914-15ರಲ್ಲಿ ರೈತರ ಮೇಲೆ ವಿಪರೀತ ಕರ ಹೇರಲಾಯಿತು. ಮಾರಕ ರೋಗಗಳಾದ ಮಲೇರಿಯ, ಪ್ಲೇಗು ಹಬ್ಬಿ ಜನಸಂಖ್ಯೆ ಗಣನೀಯವಾಗಿ ಇಳಿಯಿತು. 1901ರಲ್ಲಿ 53,071 ಇದ್ದ ಜನಸಂಖ್ಯೆ 1931ರ ವೇಳೆಗೆ 37,000ಕ್ಕೆ ಇಳಿದಿತ್ತು. ಬ್ರಿಟಿಷ್ ಆಡಳಿತದಿಂದ ಜನ ಬೇಸರಗೊಂಡಿದ್ದರು. ಮೂಲತಃ ಲೋಕಮಾನ್ಯ ಟಿಳಕರ ಕೇಸರಿಯ ಅಗ್ರಲೇಖದಿಂದ ಇಲ್ಲಿಯ ಜನ ಸ್ಫೂರ್ತಿ ಪಡೆದರು. ಕನ್ನಡ ಸುವಾರ್ತೆ (1882), ಹವ್ಯಕ ಸುಬೋಧ (1895), ಸಂಯುಕ್ತ ಕರ್ನಾಟಕ, ಕಾನಡಾವೃತ್ತ (1916), ಕಾನಡಾ ಧುರೀಣ, ಬಾಂಬೆಕ್ರಾನಿಕಲ್ ಪತ್ರಿಕೆಗಳಿಂದ ಜನರು ದೇಶವಿದೇಶದ ಸುದ್ದಿಗಳನ್ನು ತಿಳಿದುಕೊಂಡು ಬ್ರಿಟಿಷ್ ಆಡಳಿತದ ವಿರುದ್ಧ ಸಿಡಿದೆದ್ದರು. 

ಮೊದಲು ಟಿಳಕರ ವಿಚಾರಗಳನ್ನು ಬೆಂಬಲಿಸಿದ ಉತ್ತರ ಕನ್ನಡದ ಜನ ಟಿಳಕರ ಮರಣಾನಂತರ (1920) ಗಾಂಧೀಜಿಯವರು ನೇತೃತ್ತ್ವವಹಿಸಿದಾಗ ಅವರ ನಾಯಕತ್ವದಲ್ಲಿ ಹೋರಾಟ ಮುಂದುವರಿಸಿದರು. ಸ್ವದೇಶಿ ಚಳವಳಿ (1906), ಅಸಹಕಾರ ಆಂದೋಲನ, ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕರನಿರಾಕರಣೆ, ವೈಯಕ್ತಿಕ ಸತ್ಯಾಗ್ರಹ ಇವುಗಳಲ್ಲೆಲ್ಲಾ ಜಾತಿಮತಗಳನ್ನೆಣಿಸದೆ ಸಾವಿರಾರು ಜನ ಬೀದಿಗಿಳಿದು ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ನಿರತರಾದರು. ಅನೇಕರು ಶಾಲೆ ಕಾಲೇಜು ಕಚೇರಿಗಳನ್ನು ಬಿಟ್ಟು, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಜೈಲು ಸೇರಿದರು, ಕಠಿಣ ಶಿಕ್ಷೆ ಅನುಭವಿಸಿದರು. ಶಿರಸಿ, ಸಿದ್ದಾಪುರ, ಅಂಕೋಲ ಹೋರಾಟದ ಕೇಂದ್ರಗಳಾಗಿದ್ದವು. ನಾರಾಯಣ ಚಂದಾವರಕರ, ತಿಪ್ಪಯ್ಯ ಮಾಸ್ತರ, ಕಡವೆ ರಾಮಕೃಷ್ಣ ಹೆಗಡೆ, ವಾಮನ ಹೊರಿಕೆ, ಶಂಕರರಾವ್ ಗುಲ್ವಾಡಿ, ತಿಮ್ಮಪ್ಪ ನಾಯಕ, ನಾರಾಯಣ ಮರಾಠೆ, ಶಿರಳಗಿ ಸುಬ್ರಾಯಭಟ್ಟ, ಎಸ್.ಎನ್. ಕೇಶವೈನ್ ಮೊಟೆನ್ಸರ್, ತಿಮ್ಮಪ್ಪ ಹೆಗಡೆ, ದೊಡ್ಮನೆ ನಾಗೇಶ ಹೆಗಡೆ, ಭವಾನಿಬಾಯಿ ಕಾನಗೋಡು, ಸೀತಾಬಾಯಿ ಮಡಗಾಂವಕರ, ಜೋಗಿ ಬೀರಣ್ಣ ನಾಯಕ, ಎನ್.ಜಿ.ಪೈ., ನಾರಾಯಣ ಪಿ ಭಟ್ಟ ಮೊದಲಾದವರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಉತ್ತರ ಕನ್ನಡ ಜಿಲ್ಲೆಯ ಸಾಧನೆಗೆ ಚರಿತ್ರೆಯ ಪುಟಗಳಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟಿದ್ದಾರೆ. 

ಈ ಜಿಲ್ಲೆಯ ಜನ ಮಾಡಿದ ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ ಚಳವಳಿ ಇವು ಹೊಸ ಇತಿಹಾಸ ನಿರ್ಮಿಸಿದವು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೂ ಕರ್ನಾಟಕ ಏಕೀಕರಣ ಚಳವಳಿ ಮುಂದುವರಿಯಿತು. 1954ರಲ್ಲಿ ದಿನಕರ ದೇಸಾಯಿ ಮತ್ತು ಪಿ.ಎಸ್.ಕಾಮತರು ಮನವಿಯೊಂದನ್ನು ತಯಾರಿಸಿ ರಾಜ್ಯ ಮರುವಿಂಗಡಣೆ ಆಯೋಗಕ್ಕೆ ಒಪ್ಪಿಸಿದ್ದರು. 1940ರ ಸುಮಾರಿನಲ್ಲಿ ಉಳುವವನೆ ಭೂಮಿಯ ಒಡೆಯ ಎಂಬ ಘೋಷಣೆಯೊಂದಿಗೆ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಧುರೀಣತ್ವದಲ್ಲಿ ನಡೆದ ಚಳವಳಿಯಲ್ಲಿ ಜಿಲ್ಲೆಯ ಜನ ಪಾಲ್ಗೊಂಡು ಅದನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಿದರು. ಸರ್ಕಾರ ಗಾಬರಿಗೊಂಡು 1940ರಿಂದ ದಿನಕರ ದೇಸಾಯಿಯವರು ಉತ್ತರ ಕನ್ನಡ ಗಡಿಯನ್ನು ಪ್ರವೇಶಿಸದಂತೆ ಆಜ್ಞೆ ಹೊರಡಿಸಿತು. ಆಗ ದಿನಕರ ದೇಸಾಯಿಯವರು ಸರ್ವೆಂಟ್ಸ್‌ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾಗಿ ಮುಂಬಯಿಯಲ್ಲಿದ್ದರು. ಆಗ ಶೇಷಗಿರಿ ಪಿಕಳೆ ಮತ್ತು ದಯಾನಂದ ನಾಡಕರ್ಣಿಯವರು ರೈತಕೂಟದ ಸೂತ್ರಗಳನ್ನು ಕೈಯಲ್ಲಿ ಹಿಡಿದುಕೊಂಡರು. ದಿನಕರ ದೇಸಾಯಿಯವರ ಮಾರ್ಗದರ್ಶನದಲ್ಲಿ ಚಳವಳಿ ನಡೆಯುತ್ತಿತ್ತು. ರೈತರು ಬಲಿಷ್ಠಗೊಳ್ಳಲೂ ಸ್ವತಂತ್ರ್ಯರಾಗಲೂ ಇದು ಕುಮ್ಮಕ್ಕು ನೀಡಿತು. ಈ ಚಳವಳಿಯಲ್ಲಿ ಉತ್ತರ ಕನ್ನಡದ ಸಾವಿರಾರು ರೈತರು ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಮ್ಮನಸ್ಸಿನಿಂದ ದುಡಿದು ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು.

loading...