ಉಡುಪಿ ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-05
Posted by:  Admin

ಉಡುಪಿ (ತುಳು:ಒಡಿಪು) ಭಾರತ ದೇಶದ ಕರ್ನಾಟಕದ ರಾಜ್ಯದ ಒಂದು ಜಿಲ್ಲೆ. ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿಯೇ. ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಅಸ್ಥಿತ್ವಕ್ಕೆ ಬಂದಿತು. ಉತ್ತರದ ಮೂರು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ವನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನಾಗಿ ರಚಿಸಲಾಯಿತು. ಇಲ್ಲಿನ ಜನಸಂಖ್ಯೆ (೨೦೧೧ ರಂತೆ) ೧೧,೭೭,೩೬೧ ಇದರಲ್ಲಿ ೫,೩೨,೧೩೧ ಜನ ಪುರುಷರು ೬,೧೫,೨೩೦ ಮಹಿಳೆಯರೂ ಇದ್ದಾರೆ.

ಇಲ್ಲಿನ ಪ್ರಮುಖ ಭಾಷೆಗಳ:
ತುಳು,
ಕನ್ನಡ,
ನವಾಯತಿ, ಹಾಗೂ
ಕುಂದಗನ್ನಡ - ಕುಂದಾಪುರ ಕನ್ನಡ
ಕೊರಗ
ಕೊಂಕಣಿ. ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಕೆಲವು ಭಾಗಗಳನ್ನು ಒಟ್ಟಾಗಿ ತುಳುನಾಡು ಎಂದು ಕರೆಯುತ್ತಾರೆ. ಉತ್ತರದ ತಾಲೂಕಾದ ಕುಂದಾಪುರದಾದ್ಯಂತ ಕನ್ನಡವನ್ನು ಮಾತ್ರ ಉಪಯೋಗಿಸುತ್ತಾರೆ.
ಇಲ್ಲಿನ ಇತರ ಭಾಷೆಗಳೆಂದರೆ
ಬೆಳಾರಿ,
ಕೊರಗ,
ಉರ್ದು ಮೊದಲಾದವು.

ಉಡುಪಿ ಹೆಸರಿನ ನಿಷ್ಪತ್ತಿ:
ಒಂದು ನಂಬಿಕೆಯ ಪ್ರಕಾರ ಉಡುಪಿಯ ಹೆಸರು ತುಳುವಿನ ಹೆಸರು ಒಡಿಪುವಿನಿಂದ ಬಂದಿರುವುದಾಗಿ ನಂಬಲಾಗಿದೆ. ಈ ತುಳುವಿನ ಹೆಸರು ಮಲ್ಪೆ ಕಡಲ ತೀರದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನದಿಂದಾಗಿ ಬಂದಿವುದಾಗಿ ಕೆಲವು ವಿದ್ವಾಂಸರು ಸೂಚಿಸಿದ್ದಾರೆ. ಇನ್ನೊಂದು ನಂಬಿಕೆ ಯ ಪ್ರಕಾರ ಉಡುಪಿಯ ಹೆಸರು ಸಂಸ್ಕೃತ ಶಬ್ದ ಉಡು ಹಾಗೂ ಪ ಗಳಿಂದ ಬಂದಿರುವುದಾಗಿ ನಂಬಲಾಗಿದೆ. ಸಂಸ್ಕೃತ ಶಬ್ದ ಉಡು ವಿನ ಅರ್ಥ ನಕ್ಷತ್ರಗಳು ಹಾಗೂ ಪ ವಿನ ಅರ್ಥ ಒಡೆಯ.

ದಂತಕತೆಯ ಪ್ರಕಾರ, ಚಂದ್ರನ ಪ್ರಕಾಶವು ಒಂದು ಸಾರಿ ದಕ್ಷರಾಜನ ಶಾಪದಿಂದಾಗಿ ಕಡಿಮೆಯಾಯಿತು. ಚಂದ್ರನು ದಕ್ಷರಾಜನ ೨೭ ಮಗಳಂದಿರನ್ನು (ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ೨೭ ನಕ್ಷತ್ರಗಳು) ಮದುವೆ ಆಗಿದ್ದನು. ಚಂದ್ರ ಹಾಗು ಚಂದ್ರನ ಹೆಂಡತಿಯರು ಉಡುಪಿಯ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದ್ದರು. ಶಿವನು ಒಲಿದು ಚಂದ್ರನ ಪ್ರಕಾಶವು ಮರಳಿ ಬರುವಂತೆ ಮಾಡಿದನು.

ಹಾಗಾಗಿ ನಕ್ಷತ್ರಗಳ ಒಡೆಯ (ಸಂಸ್ಕೃತ: ಉಡುಪ) ತಪಸ್ಸು ಮಾಡಿದ್ದರಿಂದ ಈ ಕ್ಷೇತ್ರಕ್ಕೆ ಉಡುಪಿ ಎಂಬ ಹೆಸರು ಬಂದಿತೆಂದು ಎಂದು ಪ್ರತೀತಿ. ಆದರೆ, ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದರೆ, ಒಡಿಪು ಶಬ್ದದಿಂದ ಉಡುಪಿ ನಿಷ್ಪನ್ನವಾಗಿರುವುದು ಹೆಚ್ಚು ಸಮರ್ಪಕವಾಗಿದೆ. ಈಗಲೂ ತುಳುವಿನಲ್ಲಿ ಈ ಊರನ್ನು ಒಡಿಪು ಎಂದು ಕರೆಯಲಾಗುತ್ತಿರುವುದು ನಿಜಕ್ಕೂ ವಿಶೇಷ.

ಇತಿಹಾಸ:
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಇತಿಹಾಸ ಪರಂಪರೆಯು ಹೆಚ್ಚು ಸಮಾನ ಸ್ವರೂಪದ್ದು. ಇಡೀ ಕರ್ನಾಟಕದ ಕರಾವಳಿ ಪ್ರದೇಶ ಪರಶುರಾಮ ಸೃಷ್ಟಿಯೆಂದು ಪ್ರತೀತಿಯುಂಟು. ಮಾರ್ಕಂಡೇಯ, ವಾಯು ಮತ್ತು ಭವಿಷ್ಯೋತ್ತರ ಪುರಾಣಗಳು ಇಲ್ಲಿನ ಕೆಲವು ನದಿಗಳ ಮತ್ತು ಪರ್ವತಗಳ ಹೆಸರುಗಳನ್ನು ಉಲ್ಲೇಖಿಸುತ್ತವೆ. ತಮಿಳಿನ ‘ಸಂಗಂ’ ಕಾಲದ ಸಾಹಿತ್ಯದಲ್ಲಿ ತುಳುನಾಡಿನ ಪ್ರಸ್ತಾಪ ಬರುತ್ತದೆ.

ಅಶೋಕನ ಶಾಸನಗಳಲ್ಲಿ ಬರುವ ಸಾತಿಯಪುತ್ರ ಅಥವಾ ಸತ್ಯಪುತ್ರರೆಂಬ ಸಮುದಾಯದ ಉಲ್ಲೇಖ ಈ ಪ್ರದೇಶದ ಜನರನ್ನು ಕುರಿತದ್ದೆಂದು ಕೆಲವು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಉಡುಪಿ ಜಿಲ್ಲೆ ತೀರಪ್ರದೇಶದಲ್ಲಿ ರುವುದರಿಂದ ಇದು ಹೊರಗಿನ ಪ್ರಪಂಚದ ಸಂಪರ್ಕವನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಪ್ರಸಕ್ತ ಶಕೆಯ ಆಚೀಚೆಗಿನ ಶತಮಾನಗಳಿಗೆ ಸೇರಿದ ಗ್ರೀಕ್ ಮತ್ತು ರೋಮನ್ನರ ಪ್ರವಾಸಿ ಕಥನಗಳಲ್ಲಿ ಈ ತೀರದ ಅನೇಕ ಸ್ಥಳಗಳ ಉಲ್ಲೇಖಗಳಿವೆ.

ಅವುಗಳಲ್ಲಿ ನೇತ್ರಾವತಿ, ಮಂಗಳೂರು, ಬಸರೂರುಗಳು ಸೇರಿವೆ. ಪ್ರಾಚೀನಕಾಲದಿಂದಲೂ ಹೊರದೇಶಗಳೊಂದಿಗೆ ವಾಣಿಜ್ಯ ಸಂಪರ್ಕ ಬೆಳೆದುಬಂದದ್ದು ನಿಸ್ಸಂದೇಹ. ಗ್ರೀಕ್ ನಾಟಕವೊಂದರಲ್ಲಿ ಬರುವ ಪಾತ್ರಗಳ ಸನ್ನಿವೇಶ ಈ ಕಡಲತೀರದ್ದೆಂದು ಮತ್ತು ಅಲ್ಲಿನ ಸಂಭಾಷಣೆಯಲ್ಲಿ ಬಳಸಿರುವ ಕೆಲವು ಪದಗಳು ತುಳು ಹಾಗೂ ಕನ್ನಡ ಪದಗಳೆಂದು ಗೋವಿಂದ ಪೈಗಳು ಅಬಿಪ್ರಾಯ ಪಟ್ಟಿದ್ದಾರೆ. ಇವು ಹಳಗನ್ನಡ ಪದಗಳೆಂದು ಪ್ರತಿಪಾದಿಸುವವರೂ ಇದ್ದಾರೆ.
ಒಟ್ಟಿನಲ್ಲಿ ಈ ಜಿಲ್ಲೆ ಪ್ರ.ಶ.ಪೂರ್ವ ಕಾಲದಿಂದಲೂ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಹೊಂದಿದ್ದ ಪ್ರದೇಶವೆಂಬುದು ದೃಢಪಡುತ್ತದೆ. 

ಈ ಜಿಲ್ಲೆಯ ಇತಿಹಾಸ ಕಾಲದ ಸ್ಪಷ್ಟ ಪುರಾವೆಗಳು ದೊರಕುವುದು ಆಳುಪರ ಕಾಲದಲ್ಲಿ. ಆಳುಪರ ಆಳ್ವಿಕೆ ಪ್ರಸಕ್ತ ಶಕಾರಂಭದ ಕಾಲಕ್ಕೇ ಪ್ರಾರಂಭವಾಗುತ್ತದೆಂದು ತಿಳಿದು ಬರುತ್ತದೆ. ಅವರು ನಾಗಾರಾಧಕರಾಗಿದ್ದರು ಮತ್ತು ಶೈವ ಪಂಥೀಯರಾಗಿದ್ದರು. ಕದಂಬರು ನೆರೆಯ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ರಾಜ್ಯ ಸ್ಥಾಪಿಸಿದ ಮೇಲೆ ಈ ಪ್ರದೇಶವೂ ಅವರ ಸಾರ್ವಭೌಮತ್ವಕ್ಕೆ ಒಳಪಟ್ಟಿತ್ತು.

ಆಗ ಅವರು ಇಲ್ಲಿ ಅಹಿಚ್ಫತ್ರದಿಂದ ಬ್ರಾಹ್ಮಣರನ್ನು ಕರೆಸಿ ಇಲ್ಲಿನ ಮಠ ಮತ್ತು ಅಗ್ರಹಾರ ಪರಂಪರೆಗೆ ಬುನಾದಿ ಹಾಕಿದರೆಂದು ಹೇಳಲಾಗಿದೆ. ಜಮೀನು ಸಾಗುವಳಿ ಮತ್ತು ನಿರ್ವಹಣೆಯಲ್ಲಿ ಅನೇಕ ಕಟ್ಟುಪಾಡುಗಳನ್ನು ಕದಂಬರು ತಂದರೆಂಬ ನಂಬಿಕೆಯಿದೆ. ಕದಂಬರ ಪ್ರಾಬಲ್ಯ ಕಡಿಮೆ ಯಾಗಿ ಬಾದಾಮಿ ಚಾಳುಕ್ಯರು ಮತ್ತು ತಲಕಾಡಿನ ಗಂಗರು ಈ ಪ್ರದೇಶದ ಮೇಲೆ ನಿಯಂತ್ರಣ ಸಾದಿಸಿದಾಗ ಆಳುಪರು ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ತಮ್ಮ ರಾಜ್ಯವನ್ನು ವಿಸ್ತರಿಸಿದರು.

ಆಳುಪರನ್ನು ಸೋಮ ಕುಲದವರೆಂದೂ ಮೀನ ಲಾಂಛನದವರೆಂದೂ ಹೇಳಲಾಗಿದೆ. ಇವರು 6ನೆಯ ಶತಮಾನದ ಹೊತ್ತಿಗೆ ಉಡುಪಿ ಜಿಲ್ಲೆಯ ಉದಯಪುರ (ಉದ್ಯಾವರ) ಮಂಗಳಪುರ (ಮಂಗಳೂರು)ಗಳಲ್ಲಿ ರಾಜಧಾನಿಗಳನ್ನು ಸ್ಥಾಪಿಸಿ ಆಳಿದ್ದರಲ್ಲದೆ ಘಟ್ಟದ ಮೇಲಿನ ಕೆಲವು ಭಾಗಗಳ ಮೇಲೂ ಆಳ್ವಿಕೆ ಸ್ಥಾಪಿಸಿದರು. ಪಶ್ಚಿಮ ಚಾಳುಕ್ಯರ ಬೆಂಬಲದೊಂದಿಗೆ ಅವರು 8ನೆಯ ಶತಮಾನದವರೆಗೂ ಆಳ್ವಖೇಡ, ಬನವಾಸಿ ಮಂಡಲ ಮತ್ತು ಹೊಂಬುಚರ್ಚ್‌ (ಹೊಸನಗರ ತಾಲ್ಲೂಕು) ಪ್ರಾಂತ್ಯಗಳನ್ನು ಆಳಿದರೆಂದು ಹೇಳಬಹುದು.

ಉಡುಪಿ ಜಿಲ್ಲೆಯ ಬಾರಹಕನ್ಯಾಪುರ ಅಥವಾ ಬಾರಕೂರು ಇವರ ರಾಜಧಾನಿಗಳಲ್ಲೊಂದಾಗಿತ್ತು. ರಾಷ್ಟ್ರಕೂಟರ ಕಾಲದಲ್ಲಿ ಇವರ ಪ್ರಭಾವ ತಗ್ಗಿತ್ತು. ಗಂಗರಿಗೆ ಇವರು ನಾಮಮಾತ್ರ ಅಧೀನತೆ ತೋರಿಸಿ ಅವರೊಂದಿಗೆ ರಕ್ತಸಂಬಂಧ ಮಾಡುವ ಮೂಲಕ ಸೌಹಾರ್ದ ಬಾಂಧವ್ಯ ಹೊಂದಿದ್ದರು. ಇವರು ಕೆಲವೆಡೆ ತಮ್ಮನ್ನು ಪಾಂಡ್ಯರೆಂದು ಕರೆದುಕೊಂಡಿದ್ದಾರೆ. ಮೀನು ಇವರ ಲಾಂಛನವಾಗಿತ್ತು.

ಹೊಯ್ಸಳರು ಪ್ರಾರಂಭದಲ್ಲಿ ಆಳುಪರ ಮೇಲೆ ಸಾಂಕೇತಿಕ ಆಧಿಪತ್ಯ ಹೊಂದಿದ್ದರೂ ಮೂರನೆಯ ಬಲ್ಲಾಳನ ಕಾಲದಲ್ಲಿ ಈ ಪ್ರದೇಶದ ಆಗುಹೋಗುಗಳಲ್ಲಿ ಅವರು ಹೆಚ್ಚಾಗಿ ಭಾಗವಹಿಸಿದ್ದು ಕಂಡುಬರುತ್ತದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮುಖ್ಯವಾಗಿ ಶೈವ ಪರಂಪರೆ ಹೊಂದಿದ್ದ ಪ್ರದೇಶಗಳು. ನಾಗಾ ರಾಧನೆ ಮತ್ತು ಶಿವ ಪೂಜೆ ಇಲ್ಲಿನ ಮೂಲ ಧಾರ್ಮಿಕ ಪರಂಪರೆಯ ಸ್ವರೂಪವಾಗಿತ್ತು. ತರುವಾಯ ವೈಷ್ಣವ ಪಂಥ ಪ್ರವೇಶಿಸಿತು.

ಮಧ್ವಚಾರ್ಯರು 13ನೆಯ ಶತಮಾನದಲ್ಲಿ ಉಡುಪಿ ಯಲ್ಲಿ ಅಷ್ಟವಿಮಠಗಳನ್ನು ಸ್ಥಾಪನೆ ಮಾಡಿದ ಮೇಲೆ ಮಾಧ್ವ ವೈಷ್ಣವಮತ ಪ್ರಬಲವಾಯಿತು. ಜೈನಧರ್ಮ ಪ್ರಾರಂಭದಿಂದಲೂ ರಾಜಾಶ್ರಯ ಪಡದಿದ್ದು 18ನೆಯ ಶತಮಾನದವರೆಗೂ ಕ್ರಿಯಾಶೀಲ ಧರ್ಮವಾಗಿ ಬೆಳೆಯಿತು. ಸ್ಥಳೀಯ ಪಂಜರವಳ್ಳಿ, ಭೂತ ಮೊದ ಲಾದ ಶಕ್ತಿಗಳ ಆರಾಧನೆ ಪ್ರಾರಂಭದಿಂದಲೂ ನಡೆದುಬಂದಿದೆ. ಪಾರ್ವತಿಯ ಅವತಾರವಾದ ಶಕ್ತಿ ದೇವತೆಗಳ ಆರಾಧನೆ (ಉದಾ: ಕೊಲ್ಲೂರು ಮೂಕಾಂಬಿಕೆ) ಜನಪ್ರಿಯವಾಗಿದೆ.

ಈ ಪ್ರಾಂತದ ಜನರಿಗೆ ಧರ್ಮಶ್ರದ್ಧೆ ಹೆಚ್ಚು. ಭೂತಾರಾಧನೆಯಾಗಲೀ ಕೃಷ್ಣಪೂಜೆಯಾಗಲೀ ಹೋಮ ಹವನಗಳಾಗಲೀ ಎಲ್ಲದರಲ್ಲೂ ಇವರಿಗೆ ಹೆಚ್ಚಿನ ನಿಷ್ಟೆ. ವಿಜಯನಗರದ ಆಳ್ವಿಕೆ ಪ್ರಾರಂಭವಾದಾಗ ಹಿಂದಿನ ಪಾಳೆಯಗಾರರ ಅಥವಾ ಸ್ಥಾನಿಕ ರಾಜರ ಆಳ್ವಿಕೆಯ ಪ್ರಭಾವ ತಗ್ಗಿತು. ಆ ಕಾಲದಲ್ಲಿ ವಿಜಯನಗರದ ಸಾಮ್ರಾಟರು ನೇರವಾಗಿ ತಮ್ಮ ಪ್ರಾಂತಾದಿಕಾರಿಗಳ ಮೂಲಕ ಆಳ್ವಿಕೆ ನಡೆಸಲು ಪ್ರಾರಂಬಿಸಿದರು. ಬಾರಕೂರು ಮತ್ತು ಮಂಗಳೂರು ಈ ಆಡಳಿತ ಕೇಂದ್ರಗಳಾಗಿದ್ದವು.

ಮಂಗಳೂರು ರಾಜ್ಯವೆಂದೇ ಈ ಪ್ರಾಂತ್ಯವನ್ನು ಕರೆಯುತ್ತಿದ್ದರು. 1342ರಲ್ಲಿ ಈ ಮಾರ್ಗವಾಗಿ ಹಾದುಹೋದ ಇಬ್ನಬೂತೂತ ರಾಜ್ಯಾದಿಕಾರಿಗಳು ಆಗಾಗ ಬದಲಾಗುತ್ತಿದ್ದುದರ ಬಗ್ಗೆ ತಿಳಿಸಿದ್ದಾನೆ. ಪೋರ್ಚುಗೀಸ್ ನಾವಿಕ ವಾಸ್ಕೋಡಿಗಾಮ ಉಡುಪಿಯ ಬಳಿಯ ದ್ವೀಪಗಳಿಗೆ ಭೇಟಿ ಕೊಟ್ಟಿದ್ದನೆಂದು ತಿಳಿದುಬರುತ್ತದೆ. ಈಗ ಆ ದ್ವೀಪಗಳು ಸಂತಮೇರಿ ದ್ವೀಪಗಳೆಂದು ಹೆಸರು ಪಡೆದಿವೆ.

ವಿಜಯನಗರದ ಕೃಷ್ಣದೇವರಾಯ ಪೋರ್ಚುಗೀಸರೊಂದಿಗೆ ಹೆಚ್ಚಿನ ಸ್ನೇಹದಿಂದ ನಡೆದುಕೊಂಡ. ಆಗ ಪೋರ್ಚುಗೀಸರು ಕರಾವಳಿಯ ಬಂದರುಗಳಲ್ಲಿ ವ್ಯಾಪಾರದ ನೆಪದಲ್ಲಿ ಬಲವಾಗಿ ನೆಲೆಗೊಂಡರು. ಉಳ್ಳಾಲದ ರಾಣಿ ಅಬ್ಬಕ್ಕ ದೇವಿ ಮತ್ತು ಬಿದನೂರಿನ ನಾಯಕರು ವಿಜಯನಗರದ ಪತನದ ಅನಂತರ ಪೋರ್ಚುಗೀಸ್ರನ್ನು ಹತೋಟಿಯಲ್ಲಿಡಲು ಅನೇಕ ಕಾರ್ಯಾಚರಣೆಗಳನ್ನು ನಡೆಸಿದರು. ಬಿದನೂರ ನಾಯಕರು ಮಲ್ಪೆ ಮತ್ತು ಕುಂದಾಪುರಗಳಲ್ಲಿ ಕೋಟೆಗಳನ್ನು ನಿರ್ಮಿಸಿದರು.

ಅನೇಕ ದಂಡರಸರು ವಿಜಯನಗರ ಕಾಲದಲ್ಲಿ ಮುಂದುವರೆದಿದ್ದು ಅನಂತರ ಪ್ರಬಲರಾಗಿ ಈ ಪ್ರದೇಶದಲ್ಲಿ ಆಳಿದರು. ಅವರಲ್ಲಿ ಕಾರ್ಕಳದ ಭೈರರಸರು ಮತ್ತು ವೇಣೂರಿನ ಅಜಿಲರು ಪ್ರಮುಖರು. ಇವರ ಕಾಲದಲ್ಲಿ ಈ ಊರುಗಳಲ್ಲಿ ಅನೇಕ ಜೈನ ಬಸದಿಗಳು ವಿಶ್ವವಿಖ್ಯಾತ ಗೊಮ್ಮಟ ವಿಗ್ರಹಗಳು ನಿರ್ಮಾಣವಾದವು. ಉಡುಪಿಯ ಬಳಿ ಸುರಳದಲ್ಲಿ ತೊಳಹಾರರು ಮತ್ತು ಹೊನ್ನಕಂಬಳಿ ಅರಸರು ಆಳುತ್ತಿದ್ದರು. ಉತ್ತರಕನ್ನಡ ಜಿಲ್ಲೆಯ ಹಾಡುವಳ್ಳಿಯಿಂದ ಆಳುತ್ತಿದ್ದ ಅರಸರು ಉಡುಪಿ ಜಿಲ್ಲೆಯ ಉತ್ತರದ ಕೆಲವು ಭಾಗಗಳಲ್ಲಿ ಆಡಳಿತ ನಡೆಸಿದರು.

ಮೈಸೂರು ರಾಜ್ಯದ ಹೈದರ್ಅಲಿ ಮತ್ತು ಟಿಪ್ಪುಸುಲ್ತಾನರು ಈ ಇಡೀ ಕರಾವಳಿ ಭಾಗವನ್ನು ಗೆದ್ದಕೊಂಡರು. ಆದರೆ ಇಂಗ್ಲಿಷರ ಪ್ರಬಲ ಪ್ರತಿರೋಧದಿಂದಾಗಿ 1792ರ ಯುದ್ಧದಲ್ಲಿ ಅನಂತರದ ಒಪ್ಪಂದದ ಮೇರೆಗೆ ಈ ಭಾಗ ಬ್ರಿಟಿಷರ ವಶವಾಯಿತು. ಟಿಪ್ಪುಸುಲ್ತಾನನು ಇಲ್ಲಿನ ಅನೇಕ ಸ್ಥಳೀಯ ರಾಜರನ್ನು ಪದಚ್ಯುತಿಗೊಳಿಸಿದ್ದ. 1837ರಲ್ಲಿ ಕಲ್ಯಾಣಸ್ವಾಮಿ ಮತ್ತು ಲಕ್ಷ್ಮಪ್ಪ ಬಂಗೇಶ ಎಂಬ ಅರಸುಗಳು ಬ್ರಿಟಿಷರ ವಿರುದ್ಧ ದಂಗೆಯೆದ್ದರು. ಬ್ರಿಟಿಷರು ಈ ದಂಗೆಯನ್ನು ಅಡಗಿಸಿದರು.

1860ರಲ್ಲಿ ಕನ್ನಡ ಜನರಿದ್ದ ಕರಾವಳಿ ಪ್ರದೇಶವನ್ನು ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೆಂದು ವಿಭಜಿಸಲಾಯಿತು. 1867ರಲ್ಲಿ ಮೊದಲನೆಯದನ್ನು ಮುಂಬಯಿ ಪ್ರಾಂತ್ಯಕ್ಕೂ ಎರಡನೆಯದನ್ನು ಮದರಾಸು ಪ್ರಾಂತ್ಯಕ್ಕೂ ಸೇರಿಸಲಾಯಿತು. ಬ್ರಿಟಿಷ್ ಭಾರತದ ಭಾಗವಾಗಿದ್ದ ಈ ಕರಾವಳಿ ಜಿಲ್ಲೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಂದಿತ್ತು. ಸತ್ಯಾಗ್ರಹಿಗಳು ಸ್ವತಂತ್ರ್ಯವಾಗಿ ಪತ್ರಿಕೆಗಳನ್ನು ಹೊರಡಿಸಿ ಜನತೆಯನ್ನು ಜಾಗೃತಿಗೊಳಿಸಿದರು.

ಸ್ವದೇಶಾಭಿಮಾನಿ, ತಿಲಕ ಸಂದೇಶ (1919), ಸತ್ಯಾಗ್ರಹಿ (1921), ಸ್ವದೇಶಿ ಪ್ರಚಾರಕ (1940) ಮೊದಲಾದ ದೇಶಪ್ರೇಮಿ ಪತ್ರಿಕೆಗಳು ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದವು. ಕಾರ್ನಾಡು ಸದಾಶಿವರಾವ್, ಯು.ಎಸ್.ಮಲ್ಯ, ಕಮಲಾದೇವಿಚಟ್ಟೋ ಪಾಧ್ಯಾಯ, ಎಚ್.ವಿ.ಕಾಮತ್ ಮೊದಲಾದವರು ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯ ಲ್ಲಿದ್ದರು. ಎ.ಬಿ.ಶೆಟ್ಟಿ, ಮೋನಪ್ಪ ತಿಂಗಳಾಯ, ಬಿ.ವಿ.ಬಾಳಿಗರಂತಹ ಸಮಾಜ ಸೇವಾಕರ್ತರು ಜನರನ್ನು ಸಂಘಟಿಸಿದರು
.
1920ರಲ್ಲಿ ಗಾಂದೀಜಿ ಮತ್ತು ಶೌಕತ್ ಅಲಿಯವರು ಜಿಲ್ಲೆಗೆ ಭೇಟಿ ನೀಡಿದ್ದರು. 1922ರಲ್ಲಿ ಸರೋಜಿನಿನಾಯ್ಡು ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಅಖಿಲ ಕರ್ನಾಟಕ ರಾಜಕೀಯ ಸಮ್ಮೇಳನ ನಡೆಯಿತು. 1934ರಲ್ಲಿ ಮತ್ತೆ ಗಾಂಧೀಜಿಯವರು ಈ ಪ್ರದೇಶಕ್ಕೆ ಭೇಟಿ ನೀಡಿದರು. ಮಾರನೆಯ ವರ್ಷ ರಾಜೇಂದ್ರಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಇನ್ನೊಂದು ರಾಜಕೀಯ ಸಮ್ಮೇಳನ ಇಲ್ಲಿ ಏರ್ಪಟ್ಟಿತು. 1937ರಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರು ಜಿಲ್ಲೆಯನ್ನು ಸಂದರ್ಶಿಸಿ ಭಾಷಣ ಮಾಡಿದರು.

1942ರ ಚಲೇಜಾವ್ ಚಳವಳಿಯು ಇಲ್ಲಿ ಬಿರುಸಾಗಿ ನಡೆಯಿತು. ಆಗ ನೇತೃತ್ವ ವಹಿಸಿದ್ದ ಪ್ರಮುಖರಲ್ಲಿ ಕೆ.ಆರ್.ಕಾರಂತ, ವಿಠಲದಾಸಶೆಟ್ಟಿ, ಶ್ರೀನಿವಾಸಮಲ್ಯ, ನಾಗಪ್ಪಆಳ್ವ, ಎಂ.ಡಿ.ಅಧಿಕಾರಿ, ಶಂಕರಆಳ್ವ ಮುಂತಾದವರಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಹಾಲಿ ಉಡುಪಿ ಜಿಲ್ಲೆಯು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ಮದರಾಸು ರಾಜ್ಯದಲ್ಲೇ ಮುಂದುವರಿಯಿತು. 1956ರ ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂದ ಭಾಷಾವಾರು ಪ್ರಾಂತ್ಯದ ರಚನೆಯಲ್ಲಿ ಇದು ವಿಶಾಲ ಮೈಸೂರು ರಾಜ್ಯದ ಭಾಗವಾಯಿತು.

loading...