ಮುಂಜಾನೆಯ ಚುಮು ಚುಮು ಚಳಿಯಲ್ಲಿ ನಂದಿ ಬೆಟ್ಟದ ಕಡೆ

Published on:  2016-12-08
Posted by:  Admin

ಮುಂಜಾನೆಯ ಚುಮು ಚುಮು ಚಳಿಯಲ್ಲಿ ಗೆಳೆಯರ ಜೊತೆ ಒಂದು ದಿನದ ಪ್ರವಾಸ ಹೋಗುವುದಕ್ಕೆ ನಂದಿ ಬೆಟ್ಟ ಸೂಕ್ತವಾದ ಸ್ಥಳ. ಬರೀ ಸ್ನೇಹಿತರ ಜೊತೇನೆ ಅಲ್ಲ, ಜೋಡಿಗಳು, ಕುಟುಂಬದವರು ಎಲ್ಲರೂ ನಂದಿ ಬೆಟ್ಟಕ್ಕೆ ಹೋಗಬಹುದು. ಶನಿವಾರ, ಭಾನುವಾರ ಬಂತೆಂದರೆ ಸಾಕು ಎಲ್ಲರೂ ನಂದಿ ಬೆಟ್ಟದ ಕಡೆಗೇನೆ ಪ್ರವಾಸ.


ಬೆಂಗಳೂರಿನಿಂದ ದೇವನಹಳ್ಳಿ ಮಾರ್ಗವಾಗಿ ಸುಮಾರು 60 KM ಮತ್ತು ಚಿಕ್ಕಬಳ್ಳಾಪುರದಿಂದ 10 KM ದೂರ ಇರುವ ನಂದಿ ಬೆಟ್ಟ ಟಿಪ್ಪು ಸುಲ್ತಾನ್ ನ ಕಾಲದಲ್ಲೇ ನಿರ್ಮಾಣವಾಗಿತ್ತೆನ್ನುವು ಕಥೆ. ನ೦ದಿ ಬೆಟ್ಟದ ಹೆಸರಿನ ಮೂಲದ ಬಗ್ಗೆ ಹಲವಾರು ಕಥೆಗಳಿವೆ. ಚೋಳರ ಕಾಲದಲ್ಲಿ, ನ೦ದಿ ಬೆಟ್ಟವನ್ನು ಆನ೦ದ ಗಿರಿ ಎಂದು ಕರೆಯಲಾಗುತ್ತಿತ್ತು, ಅದರ ಅರ್ಥ ಸ೦ತೋಷದಿ೦ದ ಕೂಡಿದ ಬೆಟ್ಟ.  ಮತ್ತೊಂದು ಶಾಸನದ ಪ್ರಕಾರ ಪುರಾತನ ಕಾಲದ ಸುಮಾರು 1000 ವರ್ಷಗಳ ಹಿಂದಿನ ನಂದಿ ದೇವಾಲಯ ಬೆಟ್ಟದ ಮೇಲೆ ಇರುವುದರಿಂದ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿದೆ. ಪುರಾತನ ಕಾಲದ ಶಿವ ಮತ್ತು ಪಾರ್ವತಿಯರ ದೇವಾಲಯ ಈ ಬೆಟ್ಟವನ್ನು ಮತ್ತಷ್ಟು ಸುಂದರಗೊಳಿಸಿದೆ.


ಯೋಗ ನಂದೀಶ್ವರನೆಂಬ ತಪಸ್ಸಿಯು ತಪಸ್ಸು ಮಾಡಿದ ನಂತರ ಬೆಟ್ಟಕ್ಕೆ ಈ ಹೆಸರು ಬಂತೆಂದು ಇನ್ನೊಂದು ಕಥೆ  ಹೇಳುತ್ತದೆ. ಆಡಳಿತಗಾರನಾಗಿದ್ದ ಟಿಪ್ಪು ಸುಲ್ತಾನನು ಕೋಟೆ ಕಟ್ಟಿರುದರಿಂದ, ನಂದಿಯು ನಂದಿದುರ್ಗ(ಕೋಟೆ) ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು. ಈ ಬೆಟ್ಟವು ನಿದ್ರಿಸುತ್ತಿರುವ ವೃಷಭ(ನಂದಿ) ದಂತೆ ಕಾಣುವುದರಿಂದ ಬಹುಶಃ ಈ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿರಬಹುದು. ನಂದಿಬೆಟ್ಟ ಸಮುದ್ರಮಟ್ಟದಿಂದ 4851ಅಡಿ (1478 ಮೀ) ಎತ್ತರದಲ್ಲಿದೆ. ಇದು ಭಾರತದ ಎರಡನೆಯ ಅತ್ಯಂತ ದೊಡ್ಡ ಬೆಟ್ಟ. ಹೊಸದಾಗಿ ನಿರ್ಮಾಣಗೊಂಡ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ಜೊತೆಗೆ, ನಂದಿಬೆಟ್ಟವು ದೇವನಹಳ್ಳಿ ನಗರದ ಹತ್ತಿರದ ರಾಷ್ಟ್ರೀಯ ಹೆದ್ದಾರಿ (ಎನ್ ಹೆಚ್-7)ಯಿಂದ 20 ಕಿ.ಮಿ ದೂರದಲ್ಲಿದೆ. ಬೆಂಗಳೂರಿನ ಅಮೆಚೂರ್ ಹಮ್ ರೇಡಿಯೋ ಆಪರೇಟರ್‌ಗಳ ಮರು ಪ್ರಸಾರಣ ಕೇಂದ್ರವು ನಂದಿಬೆಟ್ಟದ ಮೇಲಿದೆ.


ಪ್ರವಾಸಿ ಆಕರ್ಷಣೆಯ ಸ್ಥಳಗಳು:
* ಟಿಪ್ಪೂ ಡ್ರಾಪ್
* ಕುದುರೆ ದಾರಿ
* ದೇವಸ್ಥಾನಗಳು
* ಮಕ್ಕಳ ಆಟದ ಮೈದಾನ


ಅಮೃತ ಸರೋವರವು ಬೆಟ್ಟದಲ್ಲಿರುವ ಒಂದು ಹೊಳೆಯುವ ನೀರಿನಿಂದ ವರ್ಷ ಪೂರ್ತಿ ತುಂಬಿ ತುಳುಕುವ ಸುಂದರ ಸರೋವರ. ಬ್ರಹ್ಮಾಶ್ರಮ - ಋಷಿ ರಾಮಕೃಷ್ಣರು ಇಲ್ಲಿ ಧ್ಯಾನ ಮಾಡಿದ್ದರೆಂದು ಹೇಳಲಾಗಿದೆ. ಇದು ಒಂದು ತಂಪಾದ ಗುಹೆ. ಆಶ್ರಮದಲ್ಲಿರುವ ಋಷಿ ಮುನಿಗಳು ಮುಂಜಾನೆ ಬೆಟ್ಟದ ಮೇಲೆ ಜೊತೆಯಾಗಿ ಕುಳಿತು ಧೂಮಪಾನ ಮಾಡಿ ತಮ್ಮ ಮುಂದಿನ ಕಾರ್ಯಗಳಿಗೆ ತೆರಳುತ್ತಿದ್ದರೆಂದು ಹೇಳ ಲಾಗಿದೆ. ಇದೇ ಪದ್ದತಿಯು ಈಗಿನ ಯುವ ಪೀಳಿಗೆಗೂ ಮುಂದುವರೆದಿದೆ.


ಬೆಂಗಳೂರಿನಿಂದ ಹಾಗೂ ಬೇರೆ ಬೇರೆ ಸ್ಥಳಗಳಿಂದ ಜನರು ನಂದಿ ಬೆಟ್ಟಕ್ಕೆ ಬರುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ನಂದಿ ಬೆಟ್ಟಕ್ಕೆ ವರ್ಷ ಪೂರ್ತಿ ಜನಗಳಿಂದ ತುಂಬಿರುತ್ತದೆ. ಚಳಿಗಾಲದಲ್ಲಿ ಮುಂಜಾನೆ ಸಮಯದಲ್ಲಿ ನಂದಿ ಬೆಟ್ಟಕ್ಕೆ ಹೋದರೆ ಏನೋ ಒಂಥರಾ ಬೇರೆಯ ಅನುಭವ. ಮನಸಿನಲ್ಲಿ ಉಲ್ಲಾಸ, ಮನಸ್ಸಿಗೆ ನೆಮ್ಮದಿ ಎಲ್ಲವೂ ಸಿಗುತ್ತದೆ. ನೀವು ಒಮ್ಮೆ ನಂದಿ ಬೆಟ್ಟಕ್ಕೆ ಹೋಗಿ ಬನ್ನಿ.

loading...