ರಾಗಿ - ನೋಡಲು ಕಪ್ಪು, ತಿಂದರೆ ಆಗುವಿರಿ ಗಟ್ಟಿ

Published on:  2016-12-15
Posted by:  Basavaraj PM

ರಾಗಿ - ಅತೀ ಹೆಚ್ಚು ಪೋಷಕಾಂಶಗಳುಳ್ಳ ಆಹಾರ ಧಾನ್ಯ. ಈ ಒಂದು ಬೆಳೆಯುತ್ತಿರುವ ನಗರಗಳ ಜೊತೆ ಮನುಷ್ಯನ ಆರೋಗ್ಯವು ದಿನೇ ದಿನೇ ಬದಲಾವಣೆಯಾಗುತ್ತಿದೆ. ಫಾಸ್ಟ್ ಫುಡ್ ಅನ್ನೋ ಕೊಬ್ಬಿನಾಂಶಗಳಿರುವ ಪದಾರ್ಥಗಳನ್ನ ಸೇವಿಸಿ ಮನುಷ್ಯ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇಂತಹ ದೈನಂದಿನ ಜೀವನದಲ್ಲಿ ರಾಗಿಯು ಮಹತ್ವವನ್ನು ತಿಳಿಯುವುದು ಮತ್ತು ಅದನ್ನು ಉಪಯೋಗಿಸಿವುದು ತುಂಬ ಉಪಯುಕ್ತ. ರಾಗಿಯಲ್ಲಿ ಅಧಿಕ ಖನಿಜಾಂಶಗಳು, ಕ್ಯಾಲ್ಸಿಯಂ ಅಂಶಗಳು ಹೇರಳವಾಗಿರುವ ಧಾನ್ಯ. ದಕ್ಷಿಣ ಭಾರತದಲ್ಲಿ, ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಮುಂಜಾನೆ ಶುರು ಆಗೋದು ರಾಗಿಯ ಊಟದಿಂದಲೇ.


ಹೌದು ದಕ್ಷಿಣ ಕರ್ನಾಟಕದಲ್ಲಿ ರಾಗಿಯು ದಿನನಿತ್ಯದ ಊಟದಲ್ಲಿ ಇರಲೇಬೇಕಾದ ಆಹಾರ ಪದಾರ್ಥ. ಎಲ್ಲ ವರ್ಗದ ಜನರಿಗೂ ರಾಗಿ ಊಟನೇ ಇಷ್ಟ. ರಾಗಿಯು ಅಷ್ಟಾಗಿ ರುಚಿಯಾಗಿರುವುದಿಲ್ಲ, ಸಪ್ಪೆಯಾಗಿರುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗಿ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ಕಾಂಬಿನೇಶನ್ ಎಲ್ಲ ಕಡೆಯಲ್ಲೂ ಬಲು ಸುಲಭವಾಗಿ ಸಿಗುವುದು ಮತ್ತು ಅದೇ ಹಬ್ಬದ ಊಟ ಕೂಡ ಹೌದು. ರಾಗಿಯನ್ನು ರೊಟ್ಟಿಯ ಹಾಗೆ, ಅನ್ನದ ಹಾಗೆ ಅಗೆದು ನುಂಗುವುದಲ್ಲ, ಅದನ್ನು ಹಾಗೆಯೇ ನುಂಗುವುದು ರೂಡಿ.

ರಾಗಿಯು ಸುಮಾರು ೪೦೦೦ ವರ್ಷಗಳ ಹಿಂದೆ ಇಥಿಯೋಪಿಯಾ ದೇಶದಿಂದ ಭಾರತಕ್ಕೆ ಬಂತು. ಏಷ್ಯಾ ಮತ್ತು ಆಫ್ರಿಕಾದ ಒಣ ಪ್ರದೇಶಗಳಲ್ಲಿ ಬೆಳೆಯುವಂತಹ ವಾರ್ಷಿಕ ಧಾನ್ಯ. ಇದು ಮನುಷ್ಯನ ಶರೀರಕ್ಕೆ ಅತೀ ಅವಶ್ಯಕವಾಗಿ ಬೇಕಾಗುವಂತಹ ಧಾನ್ಯ.


ರಾಗಿಯಿಂದ ಮಾಡಬಹುದಾದ ಪದಾರ್ಥಗಳು: ರಾಗಿ ಹಿಟ್ಟಿನಿಂದ ಬಗೆ ಬಗೆಯ ಪದಾರ್ಥಗಳನ್ನ ಮಾಡಬಹುದು. ಮುದ್ದೆ, ಗಂಜಿ, ರೊಟ್ಟಿ, ಅಂಬಲಿ ಹೀಗೆ ನಾನಾ ರೀತಿಯಲ್ಲಿ ಸುಲಭವಾಗಿ ತಯಾರಿಸಬಲ್ಲ ಧಾನ್ಯ. ಪ್ರತಿಯೊಬ್ಬರಿಗೂ ರಾಗಿಯ ಬಗ್ಗೆ ಗೊತ್ತಿರುವ ಸಂಗತಿ ಏನೆಂದರೆ ಅಧಿಕ ಶಕ್ತಿ ಮತ್ತು ಅತ್ಯಧಿಕ ಪೋಷಕಾಶಗಳುಳ್ಳ ಆಹಾರ ಧಾನ್ಯ.


ರಾಗಿಯ ಉಪಯೋಗಗಳು: ರಾಗಿಯಲ್ಲಿ ಅತೀ ಹೆಚ್ಚು ಖನಿಜಾಂಶ, ಕ್ಯಾಲ್ಸಿಯಂ, ಪ್ರೊಟೀನ್, ನಾರಿನಂಶ ಹೀಗೆ ನಾನಾ ರೀತಿಯ ಮನುಷ್ಯನಿಗೆ ಬೇಕಾದ ಎಲ್ಲ ಪೋಷಕಾಶಗಳನ್ನು ಹೊಂದಿರುತ್ತದೆ. ರಾಗಿಯು ದೇಹವನ್ನು ತಂಪು ಇಡುವಲ್ಲಿ ತುಂಬ ಸಹಕಾರಿಯಾಗಿರುತ್ತದೆ. ಬಾಣಂತಿಯರಿಗೆ, ಹುಟ್ಟಿದ ಮಕ್ಕಳಿಗೆ, ವಯಸ್ಸಾದವರಿಗೆ ಹೀಗೆ ಪ್ರತಿಯೊಬ್ಬರಿಗೂ ಬೇಕಾಗುವಂತಹ ಪದಾರ್ಥ.

* ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುವಲ್ಲಿ ರಾಗಿ ಸಹಕಾರಿಯಾಗುತ್ತದೆ. 
* ಮನುಷ್ಯನ ಮೂಳೆಗಳನ್ನ ಗಟ್ಟಿಮುಟ್ಟಾಗಿ ಇಡುತ್ತದೆ.
* ಥೈರಾಯ್ಡ್ ಸಮಸ್ಯೆ ಇರುವವರಿಗೆ ರಾಗಿಯು ತುಂಬ ಸಹಕಾರಿ. 
* ಅನೀಮೀಯದಿಂದ ಬಳಲುತ್ತಿರುವವರಿಗೆ ರಾಗಿಯು ತುಂಬ ಸಹಕಾರಿಯಾಗುತ್ತದೆ.
* ರಾಗಿಯಲ್ಲಿ ಫೈಬರ್ ಗುಣವಿರುವ ಕಾರಣದಿಂದ ಮಲಭದ್ದತೆಗೆ ಸಹಕಾರಿ.


ಬೇಸಿಗೆ ಕಾಲದಲ್ಲಿ ರಾಗಿಯ ಅಂಬಲಿ ಮತ್ತು ಮಜ್ಜಿಗೆ ಜೊತೆ ಸೇರಿಸಿ ಕುಡಿದರೆ ದೇಹ ತಂಪಾಗಿರುತ್ತೆ ಮತ್ತು ಆರೋಗ್ಯದಿಂದಿರುತ್ತೇವೆ. ಚಳಿಗಾಲದಲ್ಲಿ ರಾಗಿಯ ಅಂಬಲಿಯನ್ನು ಬಿಸಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಉಪ್ಪು, ಖಾರ, ಬೇಕಾದರೆ ಮಸಾಲೆ ಪದಾರ್ಥ ಹಾಕಿ ಕುಡಿದರೆ ತುಂಬ ಒಳ್ಳೆಯದು. ಹೀಗೆ ಎಲ್ಲ ಕಾಲದಲ್ಲೂ ರಾಗಿಯು ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿದೆ. ಅದಕ್ಕೆ ಕನ್ನಡದಲ್ಲಿ ಒಂದು ಮಾತಿದೆ, ರಾಗಿ ತಿಂದವನಿಗೆ ಯಾವ ರೋಗವೂ ಇರುವುದಿಲ್ಲ. ನೀವು ರಾಗಿಯನ್ನು ಬಳಸಿ ಇನ್ನು ಹೆಚ್ಚು ಆರೋಗ್ಯವಂತರಾಗಿರಿ.     

loading...