ಕಲಬುರಗಿ ಜಿಲ್ಲೆಯ ಸಂಕ್ಷಿಪ್ತ ಪರಿಚಯ

Published on:  2016-09-25
Posted by:  Admin

ಕಲಬುರಗಿ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಜನಸಂಖ್ಯೆ ೨೦೧೧ ರ ಜನಗಣತಿಯ೦ತೆ ೨೫,೬೪,೮೯೨. ಇದರಲ್ಲಿ ೧೩,೦೭,೦೬೧ ಪುರುಷ ಮತ್ತು ೧೨,೫೭,೮೩೧ ಮಹಿಳೆಯರು ಇದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಏಳು ತಾಲೂಕುಗಳಿವೆ. ಇಲ್ಲಿನ ಹವಾಮಾನ ಬೇಸಗೆಯಲ್ಲಿ ೪೬ ಡಿಗ್ರಿಗಳವರೆಗೆ ಹೋಗಬಲ್ಲದು; ಚಳಿಗಾಲದ ಕನಿಷ್ಠ ತಾಪಮಾನ ಸಾಮಾನ್ಯವಾಗಿ ೧೫ ಡಿಗ್ರಿ ಇರುವುದು.ಕಲಬುರಗಿ ಕರ್ನಾಟಕದ ಎರಡನೆ ಅತಿ ದೊಡ್ಡ ಜಿಲ್ಲೆ.

ಚರಿತ್ರೆ
ಕಲಬುರಗಿ ನಗರದ ಹಿ೦ದಿನ ಹೆಸರು ಕಲ್ಬುರ್ಗಿ. ಕಲಬುರಗಿಯ ಚರಿತ್ರೆಯನ್ನು ರಾಷ್ಟ್ರಕೂಟ ಅರಸರ ಕಾಲದ ವರೆಗೆ ಗುರುತಿಸಬಹುದು. ನಂತರ ಚಾಲುಕ್ಯ ಸಾಮ್ರಾಜ್ಯದ ಕೆಳಗೆ ೨೦೦ ವರ್ಷಗಳವರೆಗೆ ಕಲಬುರಗಿ ಇದ್ದಿತು. ಚಾಲುಕ್ಯರ ನಂತರ ಹನ್ನೆರಡನೆ ಶತಮಾನದವರೆಗೆ ಕಲಬುರಗಿ ಕಳಚೂರಿ ಅರಸರ ನಿಯಂತ್ರಣದಲ್ಲಿತ್ತು. ಹನ್ನೆರಡನೆಯ ಶತಮಾನದ ಕೊನೆಗೆ ದೇವಗಿರಿಯ ಯಾದವರು ಮತ್ತು ದ್ವಾರಸಮುದ್ರದ ಹೊಯ್ಸಳರು ಚಾಲುಕ್ಯ ಮತ್ತು ಕಳಚೂರಿಗಳನ್ನು ಸೋಲಿಸಿದರು. ಇದೇ ಸಮಯದಲ್ಲಿ ವಾರಂಗಲ್ ನ ಕಾಕತೀಯ ಅರಸರು ಪ್ರಾಮುಖ್ಯತೆಗೆ ಬಂದು ಕಲಬುರಗಿ ಅವರ ನಿಯಂತ್ರಣಕ್ಕೆ ಸಾಗಿತು. ಕ್ರಿ.ಶ. ೧೩೨೧ ರಲ್ಲಿ ಕಾಕತೀಯ ಅರಸರನ್ನು ಸೋಲಿಸಲ್ಪಟ್ಟು ಕಲಬುರಗಿ ದೆಹಲಿಯ ಸುಲ್ತಾನರ ಕೈ ಸೇರಿತು. 

೧೩೪೭ ರಲ್ಲಿ ದೆಹಲಿಯ ಸಾಮಂತರು ದಂಗೆಯೆದ್ದು, ಅಲ್ಲಾಹುಧ್ದೀನ ಹಸನ್ ಗಂಗು ಬಹುಮನ್ ಶಾ ೧೯೪೭ ರಲ್ಲಿ, ಬಹಮನಿ ಸಾಮ್ರಾಜ್ಯವನ್ನು ಸ್ಥಾಪಿಸಿ ಕಲಬುರಗಿಯನ್ನು ರಾಜಧಾನಿಯನ್ನಾಗಿ ಮಾಡಿದನು. ಬಹಮನಿ ಸುಲ್ತಾನರ ನಿಯಂತ್ರಣ ಕಡಿಮೆಯಾದಾಗ ಐದು ಬೇರೆ ಬೇರೆ ಬಹಮನಿ ಸಾಮ್ರಾಜ್ಯಗಳು ಸ್ಥಾಪಿತವಾಗಿ ಕಲಬುರಗಿ ಜಿಲ್ಲೆ ಭಾಗಶಃ ಬೀದರ್ ಮತ್ತು ಭಾಗಶಃ ಬಿಜಾಪುರ ಸಾಮ್ರಾಜ್ಯಗಳ ಭಾಗವಾಯಿತು. ೧೭ ನೇ ಶತಮಾನದಲ್ಲಿ ಔರಂಗಜೇಬ್ ಮತ್ತೆ ಈ ಪ್ರದೇಶವನ್ನು ಗೆದ್ದು ಕಲಬುರಗಿ ಮತ್ತೊಮ್ಮೆ ಮುಘಲ್ ಸಾಮ್ರಾಜ್ಯದ ಭಾಗವಾಯಿತು. 


೧೮ ನೇ ಶತಮಾನದ ಆದಿಯಲ್ಲಿ ಮುಘಲ್ ಸಾಮ್ರಾಜ್ಯದ ಪ್ರಭಾವ ಕಡಿಮೆಯಾಗಿ ಅಸಫ್ ಜಾ ಎಂಬ ಔರಂಗಜೇಬನ ಸೇನಾಧಿಕಾರಿ ಹೈದರಾಬಾದ್ ಸಂಸ್ಥಾನವನ್ನು ಸ್ಥಾಪಿಸಿದನು. ಕಲಬುರಗಿ ಹೈದರಾಬಾದ ಸಂಸ್ಥಾನವನ್ನು ಸೇರಿತು. ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆದರೆ, ಬೀದರ್, ಕಲಬುರಗಿ ಮತ್ತು ರಾಯಚೂರಿನ ಜನರ ತೀವ್ರ ಹೋರಾಟದ ಫಲವಾಗಿ ೧೯೪೮ ರ ಸಪ್ಟೆಂಬರ್ ನಲ್ಲಿ ಹೈದರಾಬಾದ ಸಂಸ್ಥಾನವು ಭಾರತ ಗಣರಾಜ್ಯವನ್ನು ಸೇರಿತು. ೧೯೫೬ರಲ್ಲಿ ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಕಲಬುರಗಿ ಜಿಲ್ಲೆಯ ಎರಡು ತಾಲೂಕುಗಳ ಹೊರತು ಉಳಿದವು ಮೈಸೂರು ರಾಜ್ಯಕ್ಕೆ ಸೇರಿದವು. ೧೯೭೬ ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ನಾಮಕರಣ ಮಾಡಲಾಯಿತು.

ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ಈ ಭಾಗದ ಅನೇಕ ಜನರು ಹೋರಾಟ ಮಾಡಿದ್ದಾರೆ. ಅವರಲ್ಲಿ ವೆಂಕಟಪ್ಪನಾಯಕ ಸುರಪುರ(ಬ್ರಿಟೀಶರ ಮತ್ತು ನಿಜಾಮನ ವಿರುದ್ಧ),ರಮಾನ೦ದ ತೀರ್ಥ, ಸರ್ದಾರ್ ಶರಣಗೌಡ್ ಇನಾಂದಾರ, ಚನ್ನಬಸಪ್ಪ ಕುಳಗೆರಿ, ದೇವಿಂದ್ರಪ್ಪ ಮಾಸ್ತರ್ -ಸಿಂದಗಿ( ಬಿ) (ನಿಜಾಮನ ವಿರುದ್ಧ) ಕರಬಸಪ್ಪ ಶ್ರೀಗನ್ - ಹರಸೂರ/ಶ್ರೀ ಸರಡಗಿ (ನಿಜಾಮನ ವಿರುದ್ಧ),ಮುಂತಾದವರು ಹೋರಾಟ ಮಾಡಿ ಹೈದರಾಬಾದ ನಿಜಾಮರ ವಿರುದ್ದ ಹಾಗೂ ಬ್ರೀಟಿಷರ ವಿರುದ್ಧ ಜಯ ಸಾಧಿಸಿದ್ದಾರೆ. ಕಾರಣ ಈ ಭಾಗ ಬಹು ದಿನಗಳ ಕಾಲ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತು. ಹ್ಯೆದರಾಬಾದ್ ಕರ್ನಾಟಕದಲ್ಲಿ ಜರುಗಿದ ವಿಮೋಚನಾ ಇತಿಹಾಸವನ್ನು ಮೊದಲ ಬಾರಿಗೆ ಸಂಶೋಧನೆ ಮಾಡಿ ಡಾ. ಬಿ. ಸಿ. ಮಹಾಬಲೇಶ್ವರಪ್ಪ ಅವರು ಮಹದುಪಕಾರ ಮಾಡಿದ್ದಾರೆ. ಅನಂತರ ಇಲ್ಲಿ ಪ್ರತಿ ವರ್ಷ ಸಪ್ಟೆಂಬರ್ ೧೭ ರಂದು ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ.

ಭೌಗೋಳಿಕ
ಕಲಬುರಗಿ ಬೆಂಗಳೂರಿನಿ೦ದ ೬೧೩ ಕಿಮೀ ದೂರದಲ್ಲಿದ್ದು ಬಿಜಾಪುರ, ಹೈದರಾಬಾದ್, ಬೀದರ್ ಮೊದಲಾದಲ್ಲಿಗೆ ರಸ್ತೆ ಸ೦ಪರ್ಕ ಹೊಂದಿದೆ.ಬೀದರ್ -ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಫಲವಾಗಿ ಇಂದು ಬೆಂಗಳೂರು-ಕಲಬುರಗಿ ಮಧ್ಯೆ ರಸ್ತೆ ಸಂಚಾರ ಸುಗಮವಾಗಿದೆ. ದಕ್ಷಿಣ ಭಾರತದಿ೦ದ ಉತ್ತರ ಭಾರತಕ್ಕೆ ಸಾಗುವ ರೈಲುಗಳು ಕಲಬುರಗಿಯ ಮೂಲಕ ಸಾಗುತ್ತವೆ. ಹವಾಮಾನದ ದೃಷ್ಟಿಯಿ೦ದ ಕಲಬುರಗಿಯಲ್ಲಿ ಸಾಕಷ್ಟು ಒಣ ಹವೆ ಇದೆ. ಸರಾಸರಿ ವಾರ್ಷಿಕ ಮಳೆ ಇಲ್ಲಿ ಸುಮಾರು ೭೫ ಸೆ.ಮೀ. ಇಡೀ ಜಿಲ್ಲೆ ದಖನ್ ಪ್ರಸ್ತಭೂಮಿಯ ಮೇಲಿದ್ದು ಸಮುದ್ರ ಮಟ್ಟದಿ೦ದ ಸರಾಸರಿ ಎತ್ತರ ೩೦೦ ಮೀ ಇಂದ ೭೫೦ ಮೀ. ಭಾರತದ ತೊಗರಿ ಕಣಜ ಎಂದು ಪ್ರಸಿದ್ದ ವಾಗಿದೆ.


ತಾಲೂಕುಗಳು
 • ಆಳಂದ್
 • ಅಫಜಲ್ಪುರ
 • ಕಲಬುರಗಿ
 • ಚಿಂಚೋಳಿ
 • ಸೇಡಮ್
 • ಚಿತ್ತಾಪುರ
 • ಜೇವರ್ಗಿ
ಯಾದಗಿರಿ ಕೂಡ ಕಲಬುರಗಿ ಜಿಲ್ಲೆಯ ಒಂದು ತಾಲೂಕು ಇತ್ತು,ಆದರೆ ೧೦ April, ೨೦೧೦ ಕ್ಕೆ ಯಾದಗಿರಿ,ಜಿಲ್ಲೆಯಾಗಿ ಘೋಷಿತವಾಯಿತು. ಯಾದಗಿರಿ ಜಿಲ್ಲೆಯಲ್ಲಿ ಸುರಪುರ,ಹಾಗು ಶಹಾಪುರ ತಾಲೂಕುಗಳನ್ನು ಕೂಡಿಸಲಾಯಿತು.ಆಳ್೦ದ ತಾಲುಕಿನ ಕುದಮುಡ್ ಗ್ರಾಮದಲ್ಲಿ ಪ್ರಸಿದ್ದ ವಾದ ಮಾಹಾದೇವ ದೇವಸ್ಥಾನವಿದೆ. ರೆಬ್ಬನಪಲ್ಲಿ ಪ್ರಸಿದ್ದ ಬಸವೇಶ್ವರ ದೇವಸ್ಥಾನವಿದೆ


ಕೃಷಿ
ಇಲ್ಲಿರುವ ಎರಡು ಮುಖ್ಯ ನದಿಗಳೆ೦ದರೆ ಕೃಷ್ಣಾ ಮತ್ತು ಭೀಮಾ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಯೋಜನೆಗಳಲ್ಲಿ ಮುಖ್ಯವಾದದ್ದು. ಕೃಷಿಯ ದೃಷ್ಟಿಯಿ೦ದ, ಕಲಬುರಗಿ ಜಿಲ್ಲೆಯ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ, ಅಕ್ಕಿ ಮತ್ತು ಬೇಳೆಗಳು. ಈ ಜಿಲ್ಲೆಯನ್ನು ತೊಗರಿ ಕಣಜ ಎಂದೇ ಕರೆಯುತ್ತಾರೆ

ಉದ್ಯಮ
ಉದ್ಯಮದ ದೃಷ್ಟಿಯಿ೦ದ ಕಲಬುರಗಿ ಹಿಂದುಳಿದ ಜಿಲ್ಲೆ . ಶಹಾಬಾದ್, ವಾಡಿ, ಮಲಖೇಡ್ ಗಳಲ್ಲಿ ಸಿಮೆಂಟ್ ಉದ್ಯಮಗಳಿವೆ. ಜಿಲ್ಲೆಯಾದ್ಯಂತ ದಾಲ್ ಮಿಲ್ ಗಳು ಇವೆ. ಆದರೆ ಹಳೆಯ ತಂತ್ರಜ್ಞಾನ ಮತ್ತು ಪದ್ದತಿಯನ್ನು ಬಳಸುತ್ತಿರುವುದರಿಂದ ಅನೇಕ ದಾಲ್ ಮಿಲ್ ಗಳು ನಷ್ಟದಲ್ಲಿವೆ. ನೌಕರರ ಸಮಸ್ಯೆಯಿಂದಾಗಿ ಹಲವಾರು ಉದ್ಯಮಗಳು ಬಂದಾಗಿವೆ.

ಖಾಸಗಿ ಕ್ಷೇತ್ರದ ಇಂಜನಿಯರಿಂಗ್, ವೈದಕೀಯ, ನರ್ಸಿಂಗ್, ಪಾಲಿಟೆಕ್ನಿಕ್ ಕಾಲೇಜು, ಮ್ಯಾನೇಜ್ ಮೆಂಟ್ ಕಾಲೇಜುಗಳು ಮತ್ತು ಕಾನ್ವೆಂಟ್ ಶಾಲೆಗಳು, ಈ ಜಿಲ್ಲೆಯಲ್ಲಿರುವ ಅತ್ಯಂತ ಯಶಸ್ವಿ ವ್ಯಾಪಾರ ಕೇಂದ್ರಗಳಾಗಿವೆ.

ರಾಜ್ಯ ಸರ್ಕಾರ, ಕಲಬುರಗಿದಲ್ಲಿ ಐಟಿ ಪಾರ್ಕ ಸ್ಥಾಪಿಸುವುದಾಗಿ ಹೇಳಿದೆ. ಕಲಬುರಗಿ-ಬೀದರ್ ರೈಲು ಮಾರ್ಗವಾದರೆ, ಬೆಂಗಳೂರು-ದೆಹಲಿ ಪ್ರಯಾಣದಲ್ಲಿ ಹಲವಾರು ಗಂಟೆಗಳ ಉಳಿತಾಯವಾಗುವುದು ಮತ್ತು ಕಲಬುರಗಿ-ಬೀದರ ಅಭಿವೃದ್ಧಿಯಾಗುವುದು. ಆದರೆ ಕಳೆದ ೫ ದಶಕಗಳಿಂದ ಈ ಬೇಡಿಕೆ ಹಾಗೆಯೇ ಉಳಿದಿದೆ.


ಸಾಹಿತ್ಯ
ಸಾಹಿತ್ಯ ಕ್ಷೇತ್ರಕ್ಕೆ ಕಲಬುರಗಿ ಜಿಲ್ಲೆಯ ಕೊಡುಗೆ ಅಪಾರ. ಕಲಬುರಗಿಯ ಹೆಮ್ಮೆಯ ಸಾಹಿತಿಯಾದ ಡಾ.ಗೀತಾ ನಾಗಭೂಷಣ್ ಅವರ "ಬದುಕು" ಎಂಬ ಮಹಾನ್ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕನ್ನಡದ ಪ್ರಪ್ರಥಮ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆ ಡಾ. ಗೀತಾ ನಾಗಭೂಷಣ್ ಅವರದು. ಭಾರತೀಯ ಭಾಷಾ ಪರಿಷತ್ ಕೂಡಾ ಡಾ. ಗೀತಾ ನಾಗಭೂಷಣ್ ಅವರು ಸಾಹಿತ್ಯ ಕ್ಶ್ರೆತ್ರಕ್ಕೆ ಸಲ್ಲಿಸಿದ ಸೇವೆಗೆ ೨೦೧೧-೧೨ ನೆ ಸಾಲಿನ ಸಮಗ್ರ ರಚನಾ ಪುರಸ್ಕಾರ ನೀಡಿದೆ. ಇವರು ಬರೆದ "ಕಾಗೆ ಮುಟ್ಟಿತು" ಹಸಿ ಮಾಂಸ ಮತ್ತು ಹದ್ದುಗಳು, ಚಿಕ್ಕಿಯ ಹರೆಯದ ದಿನಗಳು, ಧುಮ್ಮಸು, ದಂಗೆ, ಮಾಪುರ ತಾಯಿಯ ಮಕ್ಕಳು ಮುಂತಾದ ೩೦ ಕ್ಕೂ ಹೆಚ್ಚು ಗ್ರಂಥಗಳು ಜನರ ಮನಸ್ಸು ಗೆದ್ದಿವೆ. ಲಂಕೇಶ್ ಪತ್ರಿಕೆ , ಸುಧಾ ಮುಂತಾದ ಪ್ರಸಿದ್ದ ಪತ್ರಿಕೆ ಗಳಲ್ಲಿ ಇವರ ಧಾರಾವಾಹಿಗಳೂ ಪ್ರಕಟವಾಗಿವೆ.. ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಇವರಿಗೆ ನಾಡೋಜ ಪ್ರಶಸ್ತಿ ನೀಡಿ ಸನ್ಮಾನಿಸಿದೆ. "ನಾಡೋಜ" ಪ್ರಶಸ್ತಿ ಪಡೆದ ಕನ್ನಡದ ಪ್ರಪ್ರಥಮ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆ ಕಲಬುರಗಿಯ ಡಾ. ಗೀತಾ ನಾಗಭೂಷಣ್ ಅವರದು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ೪ ವಷ೯ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರಪ್ರಥಮ ಮಹಿಳಾ ಸಾಹಿತಿ ಕೂಡಾ ಡಾ. ಗೀತಾ ನಾಗಭೂಷಣ್ ಅವರೇ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೇಲೆ ಪ್ರತಿವಷ೯ ಇಬ್ಬರು ಮಹಿಳಾ ಸಾಹಿತಿಗಳಿಗೆ ಪ್ರಶಸ್ತಿ ನೀಡುವ ಪದ್ದತಿಯನ್ನು ಜಾರಿಗೆ ತಂದ ಶ್ರೇಯಸ್ಸು ಡಾ. ಗೀತಾ ನಾಗಭೂಷಣ್ ಅವರಿಗೆ ಸಲ್ಲುತ್ತದೆ. ಗದಗ ದಲ್ಲಿ ೨೦೧೦ ರಲ್ಲಿ ನಡೆದ ೭೬ ನೆ ಅಖಿಲ ಭಾರತ ಕನ್ನಡ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕಲಬುರಗಿ ಜಿಲ್ಲೆಯ ಆಕರ್ಷಣೆಗಳು
 • ಕಲಬುರಗಿಯ ಶರಣ ಬಸವೇಶ್ವರ ದೇವಸ್ಥಾನ
 • ಕಲಬುರಗಿಯ ಶರಣ ಬಸವೇಶ್ವರ ಕೆರೆಯ ಪಾರ್ಕ
 • ಕಲಬುರಗಿಯ ಬಂದೇ ನವಾಜ್ ದರ್ಗಾ
 • ಕಲಬುರಗಿಯ ಬಹುಮನಿ ಕೋಟೆ
 • ಕಲಬುರಗಿಯ ಶ್ರೀ ರಾಮ ಮಂದಿರ
 • ಕಲಬುರಗಿಯ ಬುದ್ಧ ವಿಹಾರ
 • ಗಾಣಗಾಪುರದ ಶ್ರೀ ದತ್ತಾತ್ರೇಯ ಮಂದಿರ
 • ಶ್ರೀ ಶ್ರೀ ದತ್ತ ದಿಗಂಬರ ಮಾಣಿಕೇಶ್ವರ ಪರಸಗೂಡ್ಡ. ಮು|| ಕಲಮೂಡ
 • ಕಲಬುರಗಿಯ ಶ್ರೀ ಸಾಯಿ ಮಂದಿರ
 • ಶ್ರೀನಿವಾಸ ಸರಡಗಿ ಲಕ್ಮಿ ಮಂದಿರ
 • ಘತ್ತರಗಿಯ ಶ್ರೀ ಭಾಗ್ಯವಂತಿ ದೇವಸ್ಥಾನ
 • ಸುರಪುರದ ಟೈಲರ್ ಮನ್ಜಿಲ್ಲ್
 • ಸುರಪುರದ ಶ್ರೀ ವೇಣುಗೋಪಾಲ ದೇವಸ್ಥಾನ
 • ಸುರಪುರದ ನಾಯಕರ ಅರಮನೆ
 • ಸನ್ನತಿಯ ಶ್ರೀ ಚಂದ್ರಲಾಂಭ ದೇವಸ್ಥಾನ
 • ಯಾನಾಗುಂದಿಯ ಶ್ರೀ ಮಾಣಿಕೇಶ್ವರಿ ದೇವಸ್ಥಾನ
 • ಕೆಸರಟಗಿಯ ಪಾರ್ಕ್
 • ಹಿಂದಿ ಪ್ರಚಾರ ಸಭಾ
 • ಕುದುಮುಡ್ ಮಹಾದೇವ ದೇವಸ್ಥಾನ
 • ಬಬಲಾದ ಶ್ರೀ ಗುರುಚನ್ನಬಸವೇಶ್ವರ
">

loading...