ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವನ್ನು ನೋಡಿದ್ದೀರ?

Published on:  2016-09-09
Posted by:  Admin

ನಮ್ಮಲ್ಲಿನ ಆಚರಣೆಗೆ ಪ್ರಕೃತಿ ಸದಾ ಸ್ಪಂದಿಸುತ್ತಲೇ ಬಂದಿದೆ. ನೆಲ, ಜಲ, ಮರಮಟ್ಟು ಎಲ್ಲವೂ ಭಕ್ತಿಯೊಂದಿಗೆ ಸಮ್ಮಿಲಿತಗೊಂಡು, ಭಕ್ತರನ್ನು ನಂಬಿಕೆಯ ದಾರಿಯಲ್ಲಿ ಕೊಂಡೊಯ್ದಿವೆ. ಅಂತಹ ನಂಬಿಕೆಯ ದಾರಿಯಲ್ಲಿ ಕಾಣುವ ನಾಡಿನ ಪ್ರಸಿದ್ಧ ಕ್ಷೇತ್ರ ಘಾಟಿಸುಬ್ರಹ್ಮಣ್ಯ.

ಸುಬ್ರಹ್ಮಣ್ಯಕ್ಷೇತ್ರವೆಂದರೆ ಅಲ್ಲಿ ನಾಗಾರಾಧನೆಯೇ ಪ್ರಮುಖ. ನಾಗದೋಷ ಪರಿಹಾರಕ್ಕೆ ಜನ ನಾಡಿನ ಮೂಲೆಮೂಲೆಗಳಿಂದ ಆಗಮಿಸುತ್ತಾರೆ. ಹೀಗೆ ಬರುವ ಭಕ್ತರಿಗೆ ಇಲ್ಲಿರುವ ಕಲ್ಯಾಣಿಯೊಳಗಿನ ನೀರು ದಿವ್ಯೌಷಧವಾಗಿ ಕೆಲಸ ಮಾಡುವ ಮೂಲಕ ಭಕ್ತರ ನಂಬಿಕೆಯನ್ನು ಹೆಚ್ಚಿಸುತ್ತಿದೆ. ‘ಜಲವೆಂದರೆ ಬರಿ ನೀರಲ್ಲ, ಅದು ಪಾವನ ತೀರ್ಥ’ ಎಂಬ ಕವಿವಾಣಿಯಂತೆ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ‘ಕುಮಾರತೀರ್ಥ’ವು ಭಕ್ತರ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ತಾಣವಾಗಿದೆ.

ಇದು ಕೇವಲ ಕಲ್ಯಾಣಿಯಲ್ಲ, ಈ ಕ್ಷೇತ್ರದ ಅಧಿಪತಿ ಸುಬ್ರಹ್ಮಣ್ಯಸ್ವಾಮಿ ಸ್ವತಃ ಸ್ನಾನ ಮಾಡುತ್ತಿದ್ದ ಕೊಳ. ಈ ನೀರು ಹಲವು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಹಲವು ಚರ್ಮವ್ಯಾಧಿಗಳಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ ಎಂಬುದು ಪುರಾತನ ಪ್ರತೀತಿ. ಕುಷ್ಠರೋಗದಂತಹ ಭೀಕರ ಸಮಸ್ಯೆಯಲ್ಲಿರುವವರು ಸಹ ಇಲ್ಲಿ ಪರಿಹಾರ ಕಂಡುಕೊಂಡಿರುವ ಹಲವು ಉದಾಹರಣೆಗಳಿವೆ.ನಾಗದೋಷ ಇರುವವರಿಗೆ ಸಾಮಾನ್ಯವಾಗಿ ಚರ್ಮರೋಗಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಅದರಂತೆ ತಮಗೆ ಬಂದ ಚರ್ಮವ್ಯಾಧಿಯಿಂದ ಮುಕ್ತಿ ನೀಡುವಂತೆ ಘಾಟಿಸುಬ್ರಹ್ಮಣ್ಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಹಾಗೆ ಬರುವ ಭಕ್ತರು ಈ ಕುಮಾರತೀರ್ಥದಲ್ಲಿ ಮಿಂದು, ಭಗವಂತನಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಹಾಗೆ ಮಾಡುವುದರಿಂದ ಬಂದೊದಗಿದ ವ್ಯಾಧಿ ದೂರವಾದ ಅದೆಷ್ಟೋ ಉದಾಹರಣೆಗಳು ಇಲ್ಲಿವೆ.

ದೇಶದಲ್ಲೇ ಸುಬ್ರಹ್ಮಣ್ಯ ಎಂದ ಕೂಡಲೇ ಮೊದಲಿಗೆ ನೆನಪಾಗುವುದೇ ಕುಕ್ಕೆ. ಆದರೆ ಮೈಸೂರುಕರ್ನಾಟಕ ಭಾಗದಲ್ಲಿ ಕುಕ್ಕೆ ಸುಬ್ರಹ್ಮಣ್ಯದಷ್ಟೇ ಖ್ಯಾತಿ ಹೊಂದಿರುವ ಘಾಟಿಸುಬ್ರಹ್ಮಣ್ಯಕ್ಕೆ ಹಲವಾರು ಖ್ಯಾತ ನಾಮರು ಭೇಟಿ ಕೊಟ್ಟು ನಾಗದೋಷ ಪರಿಹಾರಕ್ಕೆ ಪೂಜೆ ಸಲ್ಲಿಸಿದ್ದಾರೆ.ಘಾಟಿ ಸುಬ್ರಹ್ಮಣ್ಯದಲ್ಲಿ ಹರಕೆ ಮಾಡಿಕೊಂಡು, ಬೇಡಿಕೆ ಪೂರೈಸಿದ ಮೇಲೆ ಬಂದು ನಾಗರಕಲ್ಲುಗಳನ್ನು ಪ್ರತಿಷ್ಠಾಪಿಸಿ ತಮ್ಮ ಹರಕೆ ತೀರಿಸುವವರ ಸಂಖ್ಯೆ ಅಗಣಿತವಾಗಿದೆ. ಈ ಕ್ಷೇತ್ರಕ್ಕೆ ಬಂದರೆ ಎಲ್ಲಿ ನೋಡಿದರಲ್ಲಿ ನಾಗನ ಪ್ರತಿಮೆಗಳನ್ನು ಕಾಣಬಹುದು.

ಪ್ರತಿನಿತ್ಯ ಮೂರು ಕಾಲ ದೀಪಾರಾಧನೆ ಮೊದಲಾದ ಕೈಂಕರ್ಯಗಳು ನಡೆಯುತ್ತವೆ. ಮೊದಲ ಮಂಗಳಾರತಿ ಬೆಳಗಿನ ೬.೩೦ಕ್ಕೆ ನಡೆಯುತ್ತದೆ. ದೇವಸ್ಥಾನದಲ್ಲಿ ನಿತ್ಯ ಮಧ್ಯಾಹ್ನ ೧೨.೩೦ಕ್ಕೆ ಸುಬ್ರಹ್ಮಣ್ಯಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿಗೆ ಮಹಾ ಮಂಗಳಾರತಿ ನಡೆದ ಮೇಲೆ ಮಧ್ಯಾಹ್ನ೧ರಿಂದ ೩ ಗಂಟೆವರೆಗೆ. ನಾಗರ ಪಂಚಮಿಯಂದು ಇಲ್ಲಿನ ನಾಗರಕಲ್ಲುಗಳಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ದೇವಸ್ಥಾನ ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ ೦೮:೩೦ ವಗೆರೆ ದರ್ಶನಕ್ಕೆ ಅವಕಾಶವಿರುತ್ತದೆ. ಸಂತಾನ ಪ್ರಾಪ್ತಿಗಾಗಿ ಜನರು ಸುಬ್ರಹ್ಮಣ್ಯಸ್ವಾಮಿಗೆ ಹರಕೆ ಕಟ್ಟಿಕೊಳ್ಳುತ್ತಾರೆ.ಇಲ್ಲಿನ ಅಶ್ವತ್ಥ ಕಟ್ಟೆಗಳಲ್ಲಿ ನಾಗರ ಪ್ರತಿಷ್ಠಾಪಿಸಿ ಪೂಜಿಸುವ ಹರಕೆ ಬಹಳ ಹಿಂದಿನಿಂದ ನಡೆದುಕೊಂಡು ಬರುತ್ತಿದೆ. ಇಲ್ಲಿನ ಅಶ್ವತ್ಥ ಕಟ್ಟೆಯ ಮೇಲೆ ಸಾವಿರಾರು ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಘಾಟಿ ಕ್ಷೇತ್ರದಲ್ಲಿ ೪ ಕೋಟಿ ರೂ ವೆಚ್ಚದಲ್ಲಿ ಆಧುನಿಕ ಸೌಲಭ್ಯವಿರುವ ವಸತಿ ಗೃಹಗಳ ನಿರ್ಮಾಣ ಪ್ರಗತಿಯಲ್ಲಿದೆ. ಸದ್ಯಕ್ಕೆ ಘಾಟಿ ಕ್ಷೇತ್ರದಲ್ಲಿ ರಾತ್ರಿ ಉಳಿದುಕೊಳ್ಳಲು ಬಯಸುವವರಿಗೆ ನಾಲ್ಕು ಧರ್ಮ ಛತ್ರಗಳಿವೆ. ನಾಲ್ಕು ಕೊಠಡಿಗಳ ಸೌಲಭ್ಯವಿರುವ ಪ್ರವಾಸಿ ಮಂದಿರವಿದೆ. ದೇವಸ್ಥಾನಕ್ಕೆ ೧ ಕಿ.ಮೀ ದೂರದಲ್ಲಿ ಉತ್ತಮ ಸೌಲಭ್ಯಗಳಿರುವ ಹಲವು ಖಾಸಗಿ ಹೋಟೆಲ್‌ಗಳಿವೆ. ದೇಗುಲದ ಬಳಿ ಇರುವ ಅಶ್ವತ್ಥ ಕಟ್ಟೆಯಲ್ಲಿ ಹರಕೆಹೊತ್ತವರು ಬಂದು ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸುತ್ತಾರೆ.

ಇಲ್ಲಿರುವ ಕುಮಾರತೀರ್ಥದಲ್ಲಿ ಸ್ವಾಮಿಯು ಪ್ರತಿದಿನ ಸ್ನಾನ ಮಾಡುತ್ತಿದ್ದನೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ನೀರಿನ ಸಂಗ್ರಹಕ್ಕಾಗಿ ದೇವಾಲಯದ ಹಿಂಭಾಗದ ಅನತಿ ದೂರದಲ್ಲಿ ಎರಡು ಬೆಟ್ಟಗಳ ನಡುವೆ ವಿಶ್ವೇಶ್ವರಯ್ಯ ಅಣೆಕಟ್ಟು ನಿರ್ಮಿಸಲಾಗಿದೆ. ಘಾಟಿ ಕ್ಷೇತ್ರಕ್ಕೆ ದೊಡ್ಡಬಳ್ಳಾಪುರ, ಬೆಂಗಳೂರಿನಿಂದ ನೇರ ಬಸ್‌ಗಳಿವೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಗೌರಿಬಿದನೂರು, ಆಂಧ್ರಪ್ರದೇಶದ ಹಿಂದೂಪುರದ ಕಡೆಗಳಿಂದ ಬೆಳಿಗ್ಗೆ ೬ ಗಂಟೆಯಿಂದಲೇ ಘಾಟಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಡಿಸೆಂಬರ್ ತಿಂಗಳಲ್ಲಿ ಇಲ್ಲಿ ನಡೆಯುವ ದನಗಳ ಜಾತ್ರೆಗೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ ರಾಜ್ಯದ ನಾನಾ ಭಾಗಗಳ ರೈತರು ಎತ್ತುಗಳನ್ನು ಮಾರಾಟ ಮಾಡಲು ಹಾಗೂ ಕೊಳ್ಳಲು ಬರುತ್ತಾರೆ.ಪ್ರತಿವರ್ಷ ಪುಷ್ಯಮಾಸದ ಷಷ್ಠಿಯಂದು ಸುಬ್ರಹ್ಮಣ್ಯಸ್ವಾಮಿಯ ಬ್ರಹ್ಮರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ. ಈ ಸಂದರ್ಭದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ, ಕುಮಾರತೀರ್ಥದಲ್ಲಿ ಮಿಂದು, ಪೂಜೆ ಸಲ್ಲಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.

ಘೋರ್ಪಡೆ ವಂಶಸ್ಥರಿಂದ ನಿರ್ಮಾಣ
ಘಾಟಿಸುಬ್ರಹ್ಮಣ್ಯದ ಈ ದೇವಾಲಯವು ಐತಿಹಾಸಿಕವಾಗಿಯೂ ತನ್ನ ಶ್ರೀಮಂತಿಕೆಯನ್ನು ಹೊಂದಿದೆ. ಬಳ್ಳಾರಿ ಪ್ರದೇಶವನ್ನಾಳಿದ ರಾಜಮನೆತನಗಳಲ್ಲೊಂದಾದ ಘೊರ್ಪಡೆ ವಂಶಸ್ಥರು ಈ ದೇವಾಲಯವನ್ನು ಕಟ್ಟಿಸಿಕೊಟ್ಟಿದ್ದಾರೆಂಬ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ.ಕನ್ನಡಿಯಲ್ಲಿ ದೇವರ ದರ್ಶನ
ಈ ದೇವಸ್ಥಾನದಲ್ಲಿ ಒಂದು ವಿಶೇಷವಿದೆ. ಏಕಶಿಲಾ ಸ್ವಯಂಭೂ ಏಳು ಹೆಡೆಯ ಸುಬ್ರಹ್ಮಣ್ಯಸ್ವಾಮಿಯ ದರ್ಶನ ನೇರವಾಗಿ ಭಕ್ತರಿಗೆ ಲಭಿಸಿದರೆ, ಲಕ್ಷ್ಮೀನರಸಿಂಹಸ್ವಾಮಿಯ ದರ್ಶನವನ್ನು ಕನ್ನಡಿಯ ಮೂಲಕ ಭಕ್ತರು ಪಡೆಯಬೇಕು. ಪೂರ್ವಾಭಿಮುಖವಾಗಿ ಸುಬ್ರಹ್ಮಣ್ಯಸ್ವಾಮಿ ನೆಲೆನಿಂತಿದ್ದರೆ, ಲಕ್ಷ್ಮೀನರಸಿಂಹಸ್ವಾಮಿಯು ಪಶ್ಚಿಮಾಭಿಮುಖವಾಗಿ ನೆಲೆನಿಂತು ಭಕ್ತರಿಗೆ ಬಿಂಬದ ಮೂಲಕ ದರ್ಶನವೀಯುತ್ತ ಹರಸುತ್ತಿದ್ದಾನೆ.

ಹೋಗುವ ಮಾರ್ಗ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಘಾಟಿಸುಬ್ರಹ್ಮಣ್ಯವು ಬೆಂಗಳೂರಿನಿಂದ 55 ಕಿ.ಮೀ. ದೂರದಲ್ಲಿದೆ. ಘಾಟಿಸುಬ್ರಹ್ಮಣ್ಯಕ್ಕೆ ಹೋಗಲು ಉತ್ತಮ ಮಾರ್ಗವಿದ್ದು, ರಾಜ್ಯ ಹೆದ್ದಾರಿ 9ರ ಮೂಲಕ ದೊಡ್ಡಬಳ್ಳಾಪುರಕ್ಕೆ ಹೋಗಿ, ಅಲ್ಲಿಂದ ನೇರವಾಗಿ ಘಾಟಿಸುಬ್ರಹ್ಮಣ್ಯ ತಲುಪಬಹುದು.
">">

loading...