ಗದಗ ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-05
Posted by:  Admin

ಗದಗ (Gadag) (गदग) ಉತ್ತರ ಕರ್ನಾಟಕದ ಒಂದು ಜಿಲ್ಲೆ. ಗದಗ ಪಟ್ಟಣ ಈ ಜಿಲ್ಲೆಯ ಕೇಂದ್ರ. ಕೆಲವು ವರ್ಷಗಳ ಹಿಂದಿನವರೆಗೂ ಗದಗ, ಧಾರವಾಡಜಿಲ್ಲೆಯ ಭಾಗವಾಗಿದ್ದಿತು. ಈ ಜಿಲ್ಲೆಯ ಜನಸಂಖ್ಯೆ ಸುಮಾರು ೧೦ ಲಕ್ಷ.

ಗದಗ ಜಿಲ್ಲೆಯು ಪುರಾತನ ಕವಿಗಳಿಗೆ ಪ್ರಸಿದ್ಧ. ಕುಮಾರವ್ಯಾಸ, ಪಂಪ, ಲಕ್ಷ್ಮೀಶ ಮೂಲತಃ ಗದಗದವರು. ಆಧುನಿಕ ಕವಿಗಳಾದ ಆಲೂರು ವೆಂಕಟರಾಯ, ಚೆನ್ನವೀರ ಕಣವಿ ಕೂಡ ಇದೇ ಜಿಲ್ಲೆಗೆ ಸೇರಿದವರು. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ರಾಗಿ, ಬೇಳೆಗಳು, ನೆಲಗಡಲೆ, ಸೂರ್ಯಕಾಂತಿ, ಹತ್ತಿ, ಈರುಳ್ಳಿ ಮತ್ತು ಮೆಣಸಿನಕಾಯಿ. ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ.

ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.ಇದರ ಜೊತೆಗೆ ಇತಿಹಾಸ ಪ್ರಸಿದ್ಧ ಲಕ್ಕುಂಡಿ ದೇವಾಲಯಗಳಿರುವುದೂ ಗದಗ ಜಿಲ್ಲೆಯಲ್ಲಿಯೇ. ಗದಗ ಪಟ್ಟಣದಲ್ಲಿ ಅತೀ ಹೆಚ್ಚಿನ ಮುದ್ರಣಾಲಯಗಳಿದ್ದವು. ಮುದ್ರಣಾಲಯಗಳು ಒಂದು ಕಾಲದಲ್ಲಿ ಗದಗ ಶಹರದಲ್ಲಿ ಎಲ್ಲೇ ನಿಂತು ಕಲ್ಲು ತೂರಿದರೂ ಅದು ಯಾವದಾದರೊಂದು ಪ್ರಿಂಟಿಂಗ್ ಪ್ರೆಸ್ ಗೆ ಹೋಗಿ ಬೀಳುತ್ತದೆಂಬ ಪ್ರತೀತಿ ಇತ್ತು.ಅಷ್ಟೊಂದು ಮುದ್ರಣಾಲಯಗಳು ಗದಗದಲ್ಲಿದ್ದವು. ಮುದ್ರಣ ಕ್ಷೇತ್ರದಲ್ಲಿ ಕರ್ನಾಟಕದಲ್ಲೇ ಗದಗನ್ನು ಮೀರಿಸಿದವರಿರಲಿಲ್ಲ. ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ ತುಂಬ ಖ್ಯಾತಿಪಡೆದುಕೊಂಡಿದೆ.

ಭೀಷ್ಮ ಕೆರೆ ಇಲ್ಲಿನ ಅತ್ಯಂತ ದೊಡ್ಡದಾದ ಮತ್ತು ಪುರಾತನ ಕೆರೆಯಾಗಿದೆ. ಗದಗ ಪುರಾತನ ಕಾಲದಲ್ಲಿ ಕೃತಪುರ ಎಂದು ಖ್ಯಾತಿಗಳಿಸಿತ್ತು. ಭಾರತ ರತ್ನ ಭೀಮಸೇನ ಜೋಶಿ ಇಲ್ಲಿಯವರೇ. ಗದುಗಿನ ಅನೇಕ ಜನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

ಗದಗ ಮತ್ತು ಬೆಟಗೇರಿ ಅವಳಿ ನಗರಗಳು:
ಗದಗ ಜಿಲ್ಲೆಯ ಗದಗ ತಾಲೂಕಿನ ಕಣಗಿನಹಾಳದಲ್ಲಿ ಸನ್ 1905 ಇಸವಿಯಲ್ಲಿ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಬಾರಿಗೆ ಸ್ಥಾಪನೆಯಾದ ಸಹಕಾರ ಸಂಘವಿದೆ. ಗದಗಿನ ಮೂಲ ಹೆಸರುಗಳು ಕೃತುಕ, ಕೃತುಪುರ, ಕರಡುಗು ನಂತರ ಗಲದುಗು , ಗದುಗು ಮತ್ತು ಈಗ ಗದಗ ಎಂದು ಕರೆಯಲಾಗುತ್ತದೆ. ಕಪ್ಪತ ಗುಡ್ಡ ಸಹ ಇದರ ಸುತ್ತಮುತ್ತಲಲ್ಲೇ ಇವೆ.

ಗದಗ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಮಲಪ್ರಭಾ ಮತ್ತು ತುಂಗಭದ್ರಾ. ಗದಗ ಪಟ್ಟಣ ಬೆಂಗಳೂರಿನಿಂದ ೪೩೧ ಕಿಮೀ ದೂರದಲ್ಲಿದ್ದು ಧಾರವಾಡದಿಂದ ೮೦ ಕಿಮೀ ದೂರದಲ್ಲಿದೆ. ಗದಗ ಕರ್ನಾಟಕದ ೨೯ ನೇ ಜಿಲ್ಲೆ ಆಗಿರುತ್ತದೆ.

ತಾಲೂಕುಗಳು:
ಗದಗ ಜಿಲ್ಲೆಯಲ್ಲಿರುವ ತಾಲೂಕುಗಳು
* ಗದಗ
* ಶಿರಹಟ್ಟಿ
* ಮುಂಡರಗಿ
* ರೋಣ
* ನರಗುಂದ
* ಗಜೇಂದ್ರಗಡ

ಕೈಗಾರಿಕೆ:
ಗದಗಿನ ಬಹಳ ಮುಖ್ಯವಾದ ಕೈಗಾರಿಕೆ ಗದಗ ಪ್ರಿಂಟಿಂಗ್ ಪ್ರೆಸ್ ಹಾಗು ಸುಮಾರು ೧೦೦ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿವೆ. ಸಂಕೇಶ್ವರ, ಶಾಬಾದಿಮಠ , ಹೊಂಬಾಳಿ, ವಿದ್ಯಾವಿಕಾಸ, ವಿದ್ಯಾನಿಧಿ, ಪಾರು ಪ್ರಕಾಶನ ಮುಂತಾದ ಪ್ರಸಿದ್ಧ ಪ್ರಿಂಟಿಂಗ್ ಪ್ರೆಸ್ ಗಳು ಇವೆ. ಕೈಮಗ್ಗ ಹಾಗೂ ಬಣ್ಣ ಬಣ್ಣದ ಆಕರ್ಷಕ ಸೀರೆಗಳನ್ನು ನೇಯುವ ಹತ್ತಾರು ಮಂದಿ ನೇಕಾರರು ಇಲ್ಲಿದ್ದಾರೆ ಇದು ಗದಗ ಮತ್ತು ಬೆಟಗೇರಿಯ ಇನ್ನೊಂದು ಆಕರ್ಷಣೆ.

ಪವನ ವಿದ್ಯುತ್ :
ಗದಗ ಜಿಲ್ಲೆಯ ೪೦&೫೦ ಕಿಮೀ ಉದ್ದಗಲದ ಕೃಷಿಭೂಮಿಯು ಹೆಚ್ಚು ಗಾಳಿ ಬೀಸುವ ಪ್ರದೇಶವೆಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್ ಇ.ಡಿ.ಎಲ್) ಗುರುತಿಸಿದೆ. ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಯೋಗ್ಯ ಸ್ಥಳಗಳೆಂದೂ ಈ ಸಂಸ್ಥೆ ಪಟ್ಟಿ ಮಾಡಿದೆ.

ಧಾರ್ಮಿಕ:
ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ. ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.ಶ್ರೀ ತೊಂಟದಾರ್ಯ ಮಠ ಕೂಡ ಇಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಲಿದೆ.
* ಶ್ರೀ ತೊಂಟದಾರ್ಯ ಮಠ
* ಹಾಲಕೆರೆ ಅನ್ನದಾನೇಶ್ವರ ಮಠ
* ಶಿವಾನಂದ ಮಠ
* ವೀರೇಶ್ವರ ಪುಣ್ಯಾಶ್ರಮ

ಶಿಲ್ಪಕಲೆ:
ಗದಗ ಜಿಲ್ಲೆ ಶಿಲ್ಪಕಲೆಯ ಬೀಡೂ ಹೌದು. ಗದುಗಿನ ವೀರನಾರಾಯಣ, ತ್ರಿಕುಟೇಶ್ವರ ಹಾಗೂ ಸೋಮನಾಥ, ಸರಸ್ವತಿ ದೇವಾಲಯ ಪ್ರಸಿದ್ಧಿ ಪಡೆದಿವೆ. ಕ್ರಿ.ಪೂ. 950 ರಲ್ಲಿ ಪದ್ಮಬ್ಬರಸಿ ಕಟ್ಟಿಸಿದ ನರೇಗಲ್ಲದ ನಾರಾಯಣ ದೇವಾಲಯ, ರಾಷ್ಟ್ರಕೂಟರು ಕಟ್ಟಿಸಿದ ಜೈನ ದೇವಾಲಯ ಗಳಲ್ಲಿಯೇ ಅತಿ ದೊಡ್ಡದು ಆಗಿದೆ. ಶ್ರೀ ಅನ್ನದಾನೇಶ್ವ್ಹರ ಮಠ ಪ್ರಸಿದ್ಢವಾಗಿವೆ. ಲಕ್ಕುಂಡಿ ನೂರೊಂದು ಗುಡಿಗಳು ಆಕರ್ಷಣೀಯ. ಇಲ್ಲಿನ ಸೂರ್ಯ ದೇವಾಲಯ, ಬ್ರಹ್ಮ ಜೀನಾಲಯ ಗಮನ ಸೆಳೆಯುತ್ತವೆ. ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯ ರಾಷ್ಟ್ರೀಯ ಸಂರಕ್ಷಣಾ ಸ್ಮಾರಕವಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿ ಶಿಲ್ಪಕಲೆಗೆ ಜೀವ ತುಂಬಿದವರು ರಾಜವಂಶಸ್ಥರು. ಅನೇಕ ರಾಜಮಹಾರಾಜರು ಈ ಭಾಗದಲ್ಲಿ ಆಳಿದ್ದರೆಂಬುದು ಗಮನಾರ್ಹ. ಇನ್ನು ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಶಾಸನಗಳಿವೆ.

ಪ್ರಮುಖ ಬೆಳೆಗಳು:
ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು.

ಸೇವಂತಿಗೆ ಮತ್ತಿತರ ಹೂ ಬೆಳೆ 
ಹೂವಿನ ಕಣಜ : ಜಮೀನಿನಲ್ಲಿ ಸೇವಂತಿಗೆ, ಮಲ್ಲಿಗೆ, ಸುಗಂಧರಾಜ, ಗುಲಾಬಿ, ಚೆಂಡು ಹೂ ಬೆಳೆದಿದ್ದಾರೆ. ವಿಶೇಷವಾಗಿ ಸೇವಂತಿಗೆ ಹೂವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. (ವಿಶೇಷವಾಗಿ ದಸರಾ, ದೀಪಾವಳಿಗೆ ಹೂವಿಗೆ ಬೇಡಿಕೆ)

ಸಮೀಪದ ಸ್ಥಳಗಳು:
* ಲಕ್ಕುಂಡಿ
* ಡಂಬಳ
* ಶಿರಹಟ್ಟಿ
* ಲಕ್ಷ್ಮೇಶ್ವರ

ಪ್ರವಾಸ:
ಪ್ರವಾಸ ಮಾರ್ಗ ೧
ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ ,ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಣಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ, ನವಲಗುಂದ ನಾಗಲಿಂಗಮಠ, ಇಟಗಿಯ ಭೀಮಾಂಬಿಕಾ ದೇವಸ್ಥಾನ, ಸೂಡಿ ಹಾಗೂ ಕಾಲಕಾಲೇಶ್ವರ ದೇವಸ್ಥಾನ ಮತ್ತು ಕುಕನೂರ ಬಳಿಯ ಇಟಗಿ ಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೯೫ ಕಿ.ಮೀಗಳು.

ಪ್ರವಾಸ ಮಾರ್ಗ ೨
ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ , ವೀರನಾರಾಯಣ ದೇವಸ್ಥಾನ , ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಟಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ , ಮುಳಗುಂದ ದಾವುಲಮಲಿಕ ದರ್ಗಾ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ಜೈನ್ ಬಸದಿ, ಮಾಗಡಿ ಪಕ್ಷಿಧಾಮ(ಗದುಗಿನ ಪಕ್ಷಿಕಾಶಿ), ಶಿರಹಟ್ಟಿ ಫಕೀರೇಶ್ವರ ಮಠ, ವೆಂಕಟಾಪುರದ ವೆಂಕಟೇಶ ದೇವಸ್ಥಾನ ಹಾಗೂ ಡಂಬಳದ ದೊಡ್ಡ ಬಸಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೬೫ ಕಿ.ಮೀಗಳು.

loading...