ಭಾದ್ರಪದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಏಕೆ ಕರೆಯುತ್ತಾರೆ

Published on:  2016-09-25
Posted by:  Admin

ಭಾದ್ರಪದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯುತ್ತಾರೆ. ಈ ಪಕ್ಷದಲ್ಲಿ ಶ್ರಾದ್ಧವನ್ನು ಮಾಡುವದೂ ಪಿತೃತರ್ಪಣವನ್ನು ಅನುಷ್ಠಿಸುವದೂ ಪಿತೃಗಳಿಗೆ ತೃಪ್ತಿಯನ್ನುಂಟುಮಾಡುತ್ತದೆ ಎಂಬುದು ಸನಾತನ ಧರ್ಮದ ನಂಬಿಕೆ.ವೇದಗಳಲ್ಲಿ ದೇವಯಾನ, ಪಿತೃಯಾನ - ಎಂಬ ಎರಡು ಕರ್ಮಗತಿಗಳನ್ನು ವರ್ಣಿಸಿರುತ್ತದೆ. ಉಪಾಸಕರಾದವರು ದೇವಲೋಕಗಳಿಗೆ ಹೋಗಿ ಅಲ್ಲಿ ದೇವತೆಗಳ ಸಾಮಿಪ್ಯ, ಸಾಲೋಕ್ಯ, ಸಾಯುಜ್ಯ - ಎಂಬ ಫಲಗಳನ್ನು ಅನುಭವಿಸುತ್ತಾರೆ.ಕರ್ಮಿಗಳಾದವರು ಪಿತೃಲೋಕಕ್ಕೆ ಹೋಗಿ ಅಲ್ಲಿ ತಮ್ಮ ತಮ್ಮ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಅನುಭವಿಸುತ್ತಾರೆ- ಹೀಗೆಂಬುದು ಶಾಸ್ತ್ರಕಾರರ ಹೇಳಿಕೆ.ಪಿತೃಗಳಿಗೆ ತೃಪ್ತಿಯಾಗಲೆಂದು ಶ್ರದ್ಧೆಯಿಂದ ಮಾಡುವ ನಿಯತಕಾಲಿಕ ಕರ್ಮವನ್ನು ಶ್ರಾದ್ಧವೆಂದು ಕರೆಯುತ್ತಾರೆ; ಎಳ್ಳುನೀರುಗಳನ್ನು ಪಿತೃತೃಪ್ತ್ಯರ್ಥವಾಗಿ ಬಿಡುವ ಕರ್ಮವನ್ನು ತರ್ಪಣವೆನ್ನುತ್ತಾರೆ. 

ಶಕ್ತನಾದವನು ಪಿತೃಪಕ್ಷದಲ್ಲಿ ಪ್ರತಿದಿನವೂ ಶ್ರಾದ್ಧವನ್ನು ಮಾಡಿ ತರ್ಪಣವನ್ನು ಕೊಡಬೇಕು, ಅಶಕ್ತರಾದವರು ಗೊತ್ತಾದ ಒಂದು ದಿನವಾದರೂ ಈ ಕರ್ಮವನ್ನು ಮಾಡಬೇಕು. ಈ ಶ್ರಾದ್ಧಕ್ಕೆ ಮಹಾಲಯವೆಂಬ ಹೆಸರೂ ಬಂದಿರುತ್ತದೆ. ಈ ಪಕ್ಷವನ್ನು ಮಹಾಲಯಪಕ್ಷವೆಂದು ಕರೆಯುವ ವಾಡಿಕೆಯೂ ಇದೆ.ಪಿತೃಗಳಿಗೆಂದು ಶ್ರಾದ್ಧವನ್ನು ಮಾಡಿದರೆ, ತರ್ಪಣವನ್ನು ಕೊಟ್ಟರೆ ಅವರಿಗೆ ಅದು ತೃಪ್ತಿಯನ್ನು ಹೇಗೆ ಮಾಡುತ್ತದೆ?ಶ್ರಾದ್ಧಕರ್ಮಗಳಲ್ಲಿ ಮಾಡುವ ಹೋಮ, ಬ್ರಾಹ್ಮಣ ಭೋಜನ, ಪಿಂಡಪ್ರದಾನ, ತರ್ಪಣ - ಇವುಗಳು ಈ ಲೋಕದಲ್ಲಿ ಆಗುವದರಿಂದಅವುಗಳ ಫಲವು ಪಿತೃಗಳು ಎಲ್ಲಿದ್ದರೂ ಅವರಿಗೆ ಮುಟ್ಟುವದೆಂದು ನಂಬುವದು ಹೇಗೆ? ಆ ಪಿತೃಗಳು ಬೇರೊಂದು ಜನ್ಮವನ್ನು ಪಡೆದಿದ್ದರೆ ಶ್ರಾದ್ಧಕ್ಕೆ ಯಾವ ಪ್ರಯೋಜನವಾಗುವದು? - ಎಂದು ಕೆಲವರು ಯುಕ್ತಿಪ್ರಧಾನವಾದ ಪ್ರಶ್ನೆಗಳನ್ನು ಮಾಡುತ್ತಿರುತ್ತಾರೆ. 

ಈ ಪ್ರಶ್ನೆಗಳಿಗೆ ಪ್ರತ್ಯಕ್ಷಾದಿ ಪ್ರಮಾಣಗಳಿಂದ ಸಮಾಧಾನಕರವಾದ ಉತ್ತರವನ್ನು ಹೇಳುವದು ಕಷ್ಟ ಏಕೆಂದರೆ ಕರ್ಮಗಳಿಗೆ ಇಲ್ಲಿಯೇ ಅನುಭವಾರೂಡವಾದ ಫಲವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಿರುವದಿಲ್ಲ ಆದ್ದರಿಂದ ಇಲ್ಲಿ ನಂಬಿಕೆಗಳೇ ಪ್ರಧಾನವಾಗುತ್ತದೆ ಎಂದು ಹೇಳಬೇಕಾಗುತ್ತದೆ. ಕರ್ಮಗಳಿಗೆ ಅದೃಷ್ಟವಾದ ಫಲವೂ ಆಗಬಹುದೆಂಬುದನ್ನು ನಂಬುವದಕ್ಕೆ ತಕ್ಕಷ್ಟು ಕಾರಣವು ಇದ್ದೇ ಇದೆ.ಪರಮೇಶ್ವರನ ಸೃಷ್ಟಿಯಲ್ಲಿ ಅತ್ಯಂತವಿಲಕ್ಷಣವಾದ ಕಾರಣಗಳಿಂದ ಅತ್ಯಂತ ವಿಲಕ್ಷಣ ಕಾರ್ಯಗಳು ಆಗುತ್ತಿರುವದು ನಮ್ಮೆಲ್ಲರ ಅನುಭವದಲ್ಲಿಯೂ ಇದೆ. ನಾವು ಕೊಟ್ಟ ಪಿಂಡವನ್ನು ಶ್ರಾದ್ಧಾನ್ನವನ್ನೂ ಹೋಮಾದಿಯನ್ನೂ ತರ್ಪಣಗಳನ್ನೂ ನಮ್ಮ ಪೂರ್ವಜರಾದ ಪಿತೃಗಳಿಗೆ ಹೀಗೆಯೇ ಒಂದಾನೊಂದು ಅದೃಷ್ಟಕ್ರಮದಿಂದ ತಲುಪಿಸುವ ಏರ್ಪಾಡನ್ನು ಕೆಲವರು ಪಿತೃದೇವತೆಗಳು ಮಾಡುತ್ತಾರೆಂಬ ನಂಬಿಕೆ ಇದೆ.ಶ್ರಾದ್ಧದಲ್ಲಿ ನಾವು ಮಾಡುವ ಅನ್ನದಾನತಿಲತರ್ಪಣಾದಿಗಳಿಂದ ನಮಗೂ ಫಲವುಂಟು. 

ತಿಲವು ಭಗವಂತನ ಮನಸ್ಸಿನಿಂದಲೂ ಕುಶವು ಆತನ ಪ್ರಾಣದಿಂದಲೂ ಉಂಟಾಗಿರುವವೆಂದು ಪುರಾಣವಚನವಿದೆ. ಕರ್ಮಗಳಲ್ಲಿ ಅವುಗಳ ಪ್ರಯೋಗದಿಂದ ನಮ್ಮ ಮನಃಪ್ರಾಣಗಳಿಗೆ ಒಂದಾನೊಂದು ಸಂಸ್ಕಾರವಾಗುವದೆಂದು ಇದರಿಂದ ಸೂಚಿತವಾಗುತ್ತದೆ. ಪಿತೃಪಿತಾಮಹಾದಿಗಳಿಗೇ ಅಲ್ಲದೇ ನಾನು ಕೊಡುವ ತರ್ಪಣದಿಂದ ಜಲಚರ, ಭೂಚರ, ವಾಯುಚರಜಂತುಗಳಿಗೆಲ್ಲ ತೃಪ್ತಿಯಾಗಲಿ! ಎಂಬ ಭಾವನೆಯಿಂದ ತರ್ಪಣವನ್ನು ಕೊಡುವ ಮನೋಭಾವನೆಯಲ್ಲಿ ಎಂಥ ಸರ್ವಭೂತಪ್ರೇಮವು ಅಡಗಿರುತ್ತದೆ !ಪಿತೃಗಳು ಪ್ರಸನ್ನರಾಗಲಿ! ನಮ್ಮ ಗೋತ್ರ ಬೆಳೆಯಲಿ! ನಮ್ಮದಾತೃಗಳು ಅಭಿವೃದ್ಧಿಯನ್ನೈದಲಿ! ಸಂತತಿಯೂ ಮುನ್ನಡೆಯಲಿ!ನಮ್ಮ ಶ್ರದ್ಧೆಯು ಎಂದಿಗೂ ಸಡಿಲವಾಗದಿರಲಿ! ನಮ್ಮಲ್ಲಿ ದಾನದ್ರವ್ಯವು ಹೆಚ್ಚುತ್ತಿರಲಿ! ನಮ್ಮಲ್ಲಿ ಅನ್ನವು ಹೆಚ್ಚುತ್ತಿರಲಿ! ಅತಿಥಿಗಳು ನಮಗೆ ದೊರಕುತ್ತಿರಲಿ! ನಮ್ಮಲ್ಲಿ ಯಾಚನೆಗೆ ಬರುವವರು ಇರಲಿ, ನಾವು ಯಾರಲ್ಲಿಯೂ ಯಾಚನೆಮಾಡದಿರುವಂತಾಗಲಿ! ಎಂದು ಶ್ರಾದ್ಧಾಂತದಲ್ಲಿ ನಾವು ಮಾಡುವ ಪ್ರಾರ್ಥನೆಯಾಗಿದೆ.

ವೈಜ್ಞಾನಿಕ ವಿಶ್ಲೇಷಣೆಶ್ರಾದ್ಧ ಕ್ರಿಯೆಯು ದೈವಿಕವಾಗಿದ್ದರೂ ವೈಜ್ಞಾನಿಕತೆಗೆಎಟುಕಲಾರದ ವಿಷಯವಲ್ಲ. ಪಂಚಭೂತಗಳಿಂದ ಭೌತಿಕ ಶರೀರ ಉಂಟಾಗಿದೆ. ಮರಣಾನಂತರ ಇದು ನಾಶವಾದರೂ, ತೇಜಸ್ಸು, ವಾಯುವೀಯ ಮತ್ತು ಆಕಾಶ ತತ್ವಗಳು ಮನೋಮಯ ಕೋಶದೊಡನೆ ಕರ್ಮಾನುಸಾರ ಶರೀರಾಂತರವನ್ನು ಸೇರುವುದು. ತಂದೆಯ ಸೂಕ್ಷ್ಮ ಶರೀರಕ್ಕೂ ಪುತ್ರನ ಸೂಕ್ಷ್ಮ ಶರೀರಕ್ಕೂ ಪರಸ್ಪರ ಆಕರ್ಷಣೆಯ ಋಣಾನುಬಂಧವಿದೆ.ಪಿತೃವಿನ ಮರಣಾನಂತರವೂ ಈ ಸಂಬಂಧವು ತೊಲಗಲಾರದು. ಆದಕಾರಣ ಪುತ್ರಕೃತ ಸಂಸ್ಕಾರಗಳು ಪಿತೃಗಳ ಸದ್ಗತಿಗೆ ಸಾಧಕಗಳಾಗುವುದು. ಇದು ಶಾಸ್ತ್ರಸಿದ್ಧ, ಯುಕ್ತಿಸಿದ್ಧ. ಪುತ್ರನ ಪೂರ್ವ ಸಂಸ್ಕಾರಗಳ ಅಧಿಕಾರ ತಂದೆಗೆ ಬಂದಂತೆ ಅವರ ಸಂಸ್ಕಾರಗಳಿಗೆ ಪುತ್ರನು ಅಧಿಕಾರಿಯಾಗುತ್ತಾನೆ. 

ಭೂಮಿ, ಅಂತರಿಕ್ಷ, ಸ್ವರ್ಗಗಳನ್ನು ಏಕಕಾಲದಲ್ಲಿ ವ್ಯಾಪಿಸುವ ಸೌರ ತೇಜಸ್ಸನ್ನು ಸವಿತುಃ ವರೇಣ್ಯಂ ಭರ್ಗಃ ಎಂದು ಕರೆಯಲಾಗಿದೆ. ಮೃತ ವ್ಯಕ್ತಿಯ ಸೂಕ್ಷ್ಮ ಶರೀರವು ಯಾವ ಅಜ್ಞಾತ ಯೋನಿಯಲ್ಲಿದ್ದರೂ (ಆಕಾಶದ ಶಬ್ದ, ವಾಯುವಿನ ಸ್ಪರ್ಶ, ತೇಜಸ್ಸಿನ ತರಂಗಗಳು ಇಲ್ಲಿಂದಲ್ಲಿಗೆಸದಾ ಪ್ರವಹಿಸುತ್ತಿರುವ ಕಾರಣ) ಮಾಡುವ ಶ್ರಾದ್ಧದಲ್ಲಿ ಕ್ರಿಯಾಶಕ್ತಿ, ಮಂತ್ರಶಕ್ತಿ, ದ್ರವ್ಯಶಕ್ತಿಗಳು ಸಮ್ಮಿಳಿತವಾಗಿ ಲೋಕಾಂತರದಲ್ಲಿರುವ ಪಿತೃಗಳಿಗೆ (ಪಿಂಡ ತಿಲತರ್ಪಣಗಳು) ರೂಪಾಂತರ ಹೊಂದಿ ಆಹಾರವಾಗಿ ಪರಿಣಮಿಸುತ್ತದೆ. ಮಾನವನ ಸೀಮಿತ ದೃಷ್ಟಿಗೆ ಇದು ಗೋಚರಿಸದಿದ್ದರೂ ಶ್ರಾದ್ಧೇ ಯೋಗಃ ಪ್ರವರ್ತತೇ ಎಂದು ಋಷಿಗಳು ಈ ತಣ್ತೀರಹಸ್ಯವನ್ನು ಮನಗಂಡಿದ್ದಾರೆ.

ಪಿತೃಗಳ ಸ್ಮರಣೆ ಮಹತ್ವಪ್ರತಿ ವೈದಿಕ ಕ್ರಿಯೆಯಲ್ಲೂ ಗತಿಸಿದ ಪಿತೃಗಳನ್ನು ಸ್ಮರಿಸಿ ಪಿತೃದೇವತಾಂ ನಮಸ್ಕೃತ್ಯ ಎಂದು ಅನುಗ್ರಹ ಪಡೆದು ಕ್ರಿಯೆ ಮುಂದುವರಿಸುವುದು ಸಂಪ್ರದಾಯ. ಪಿತೃದೇವತೆಗಳ ಅನುಕೂಲಕ್ಕಾಗಿ ಋಣಸಂದಾಯದ ಮೂಲಕ ಕರ್ತವ್ಯ ಪಾಲನೆಗೆ, ಅಮಾವಾಸ್ಯೆ, ಗ್ರಹಣಕಾಲ, ಸಂಕ್ರಮಣ, ಪರ್ವಕಾಲ ಗಳು ಮೊದಲಾದ ಸಂದರ್ಭಗಳಲ್ಲಿ ಗತಿಸಿದ ಮಾತಾ - ಪಿತೃಗಳ ಮರಣ ದಿವಸ, ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆವರೆಗೆ ಬರುವ ಮಹಾಲಯ - ಈ 15 ದಿನಗಳು ಪಿತೃಪಕ್ಷವೆನಿಸಿ, ಶ್ರಾದ್ಧಾವಿಧಿಗಳಿಗೆ ಪ್ರಾಶಸ್ತ್ಯ ಎಂದು ಹೇಳಿದೆ.ಪಿತೃಕ್ರಿಯೆಗಳಿಗೆ ಅಮಾವಾಸ್ಯೆ ಪ್ರಶಸ್ತಪಿತೃಲೋಕವು ಚಂದ್ರಲೋಕದ ಮೇಲ್ಭಾಗದಲ್ಲಿದೆ. ಶುಕ್ಲಪಕ್ಷದಲ್ಲಿ ಚಂದ್ರನು ಸೂರ್ಯನಿಂದ ದೂರ ಸರಿಯುತ್ತಾನೆ. 

ಆಗ ಪಿತೃಗಳಿಗೆ ರಾತ್ರಿ. ಕೃಷ್ಣಪಕ್ಷದಲ್ಲಿ ಸೂರ್ಯನು ದಿನದಿಂದ ದಿನಕ್ಕೆ ಚಂದ್ರಗೋಳದ ಹತ್ತಿರ ಬಂದು ಅಮಾವಾಸ್ಯೆಯಂದು ಒಂದೇ ಕಕ್ಷೆಯಲ್ಲಿ (ಸರಳ ರೇಖೆಯಲ್ಲಿ)ಸೇರಿದಾಗ ಪಿತೃಗಳಿಗೆ ಮಧ್ಯಾಹ್ನ ಕಾಲ. ಭಾಸ್ಕರಾಚಾರ್ಯರು ಸಿದ್ಧಾಂತ ಶಿರೋಮಣಿ ಗೋಲಾಧ್ಯಾಯ ಶ್ಲೋಕ ಎಂಟರಲ್ಲಿ ಈ ರಹಸ್ಯವನ್ನುಹೇಳಿದ್ದಾರೆ. ಕಾಲಗಣನಾನುಸಾರ ಪಿತೃಗಳ ಒಂದು ದಿನಕ್ಕೆ ಮಾನವರ ಒಂದು ವರ್ಷ ಬೇಕು. ಪಿತೃದೇವತೆಗಳಿಗೆ ದೂರದರ್ಶನ ಶ್ರವಣಶಕ್ತಿಗಳಿವೆ. ಮಂತ್ರ ಸ್ವರಗಳ ಸ್ಪಂದನ (ತರಂಗ)ಗಳು ಪಿತೃದೇವತೆಗಳಲ್ಲಿ ಪ್ರಭಾವವನ್ನು ಬೀರುತ್ತವೆ. ಒಂದು ದಿನಕ್ಕೆ ಮಾನವರ ಒಂದು ವರ್ಷ ಬೇಕು. ಪಿತೃದೇವತೆಗಳಿಗೆ ದೂರದರ್ಶನ ಶ್ರವಣಶಕ್ತಿಗಳಿವೆ. ಮಂತ್ರ ಸ್ವರಗಳ ಸ್ಪಂದನ (ತರಂಗ)ಗಳು ಪಿತೃದೇವತೆಗಳಲ್ಲಿ ಪ್ರಭಾವವನ್ನು ಬೀರುತ್ತವೆ.

loading...