ಬೆಳಗಾವಿ ಜಿಲ್ಲೆಯ ಸಂಕ್ಷಿಪ್ತ ಪರಿಚಯ ಭಾಗ 1

Published on:  2016-10-05
Posted by:  Admin

ಬೆಳಗಾವಿ ಉತ್ತರ ಕರ್ನಾಟಕದಲ್ಲಿ ಇರುವ ನಗರ ಮತ್ತು ಜಿಲ್ಲೆ. ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಹಾಗು ಪ್ರಮುಖ ನಗರಗಳಲ್ಲೊಂದು. ರಾಜ್ಯದ ಎರಡನೇ ರಾಜಧಾನಿ ಎಂದು ನೇಮಿಸಲ್ಪಟ್ಟ ಮಹಾನಗರ (ಅಂಗೀಕಾರವಾಗಿಲ್ಲ). ಇಂಡಾಲ್ (ಭಾರತೀಯ ಅಲ್ಯೂಮಿನಿಯಮ್ ಕಂಪನಿ) ಬೆಳಗಾವಿಯಲ್ಲಿದೆ. ಇದಲ್ಲದೆ ಭಾರತೀಯ ಸೇನಾ ಪಡೆಗಳಿಗೆ ಸಂಬಂಧಪಟ್ಟ ಕೆಲವು ತರಬೇತಿ ಶಿಬಿರಗಳು ಮತ್ತು ಭಾರತೀಯ ವಾಯುಸೇನೆಯ ಒಂದು ವಿಮಾನ ನಿಲ್ದಾಣ ಬೆಳಗಾವಿಯಲ್ಲಿವೆ.

ಬೆಳಗಾವಿಯ ಪುರಾತನ ಹೆಸರು ವೇಣುಗ್ರಾಮ. ಆದರೆ ಈಗಿರುವ ಹೆಸರು ಬಂದದ್ದು ಬೆಳ್ಳಗೆ+ಆವಿ ಎಂದರೆ ಇಲ್ಲಿನ ವಾತಾವರಣದಲ್ಲಿ ಬೆಳಗಿನ ಜಾವ ಮಂಜು ಬೀಳುತ್ತಿರುತ್ತದೆ. ಅದರಿಂದ ಬೆಳ್ಳಗಾವಿ ಹೆಸರು ಬಂದಿದೆ. ಈ ಜಿಲ್ಲೆಯ ಅತಿ ಪ್ರಾಚೀನ ಸ್ಥಳ ಎಂದರೆ ಹಲಸಿ - ಉಪಲಬ್ಧವಾಗಿರುವ ತಾಮ್ರಶಾಸನಗಳ ಆಧಾರದ ಮೇಲೆ ಹಲಸಿ ಕೆಲವು ಕದಂಬವಂಶದ ಅರಸರ ರಾಜಧಾನಿಯಾಗಿದ್ದಿತೆಂದು ಊಹಿಸಲಾಗಿದೆ. ೬ ನೇ ಶತಮಾನದಿಂದ ಸುಮಾರು ಕ್ರಿ.ಶ. ೭೬೦ ರ ವರೆಗೆ ಈ ಸ್ಥಳ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದು, ನಂತರ ರಾಷ್ಟ್ರಕೂಟರ ನಿಯಂತ್ರಣಕ್ಕೆ ಸಾಗಿತು. ರಾಷ್ಟ್ರಕೂಟರ ಶಕ್ತಿ ಕಡಿಮೆಯಾದ ನಂತರ ರತ್ತ ವಂಶದ (೮೭೫ - ೧೨೫೦)ಕೈಯಲ್ಲಿದ್ದ ವೇಣುಗ್ರಾಮ, ೧೨೧೦ ರ ನಂತರ ರಾಜಧಾನಿಯಾಯಿತು. ೧೨೫೦ ರ ನಂತರ ದೇವಗಿರಿಯ ಯಾದವರು ಈ ಪ್ರದೇಶವನ್ನು ಸ್ವಲ್ಪ ಕಾಲ ಆಳಿದರು. ೧೩೨೦ ರಲ್ಲಿ ದೆಹಲಿಯ ಸುಲ್ತಾನೇಟ್ ಗಳ ಕೈಯಲ್ಲಿ ಯಾದವರು ಸೋಲನುಭವಿಸಿದ ನಂತರ ಸ್ವಲ್ಪ ಕಾಲ ದೆಹಲಿಯ ಆಡಳಿತದಲ್ಲಿ ಬೆಳಗಾವಿ ಜಿಲ್ಲೆ ಇತ್ತು. 

ಆದರೆ ಕೆಲವೇ ವರ್ಷಗಳ ನಂತರ ವಿಜಯನಗರ ಸಾಮ್ರಾಜ್ಯ ಈ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಬೆಳಗಾವಿ ಜಿಲ್ಲೆಯ ಉತ್ತರದ ಭಾಗಗಳು ೧೩೪೭ ರಲ್ಲಿ ಬಹಮನಿ ಸುಲ್ತಾನರ ಕೈ ಸೇರಿದವು. ೧೪೭೩ ರಲ್ಲಿ ಬೆಳಗಾವಿ ಪಟ್ಟಣ ಮತ್ತು ಜಿಲ್ಲೆಯ ಉಳಿದ ಭಾಗಗಳನ್ನು ಸಹ ಬಹಮನಿ ಸುಲ್ತಾನರು ಗೆದ್ದರು. ಬಿಜಾಪುರದ ಸುಲ್ತಾನರನ್ನು ಔರಂಗಜೇಬ್ ೧೬೮೬ ರಲ್ಲಿ ಸೋಲಿಸಿದ ಮೇಲೆ ಸ್ವಲ್ಪ ಕಾಲ ಬೆಳಗಾವಿ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೭೭೬ ರಲ್ಲಿ ಹೈದರ್ ಅಲಿ ಈ ಪ್ರದೇಶವನು ಗೆದ್ದರೂ ಬ್ರಿಟಿಷರ ಸಹಾಯದಿಂದ ಮರಾಠಾ ಪೇಶ್ವೆಗಳು ಈ ಪ್ರದೇಶವನ್ನು ಗೆದ್ದರು. 

೧೮೧೮ ರಲ್ಲಿ ಬ್ರಿಟಿಷರ ಆಡಳಿತಕ್ಕೆ ಸಾಗಿದ ಬೆಳಗಾವಿ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ೧೮೩೬ ರಲ್ಲಿ ಈ ಜಿಲ್ಲೆಯನ್ನು ಎರಡು ಭಾಗವಾಗಿ ಮಾಡಿ ಉತ್ತರ ಭಾಗವನ್ನು ಬೆಳಗಾವಿ ಜಿಲ್ಲೆಯಾಗಿ ಮಾಡಲಾಯಿತು.೧೯೪೭ ರಲ್ಲೆ ಭಾರತ ಸ್ವಾಂತಂತ್ರ್ಯಪಡೆದ ನಂತರ ಬೆಳಗಾವಿ ಮುಂಬಯಿ ರಾಜ್ಯದ ಭಾಗವಾಯಿತು ಆದರೆ ೧೯೫೬ ರಲ್ಲಿ ನಡೆದ ರಾಜ್ಯಗಳ ಮರುವಿಂಗಡನಾ ಕಾಯ್ದೆಯ ಪ್ರಕಾರ ಬೆಳಗಾವಿಯನ್ನು ಆಗಿನ ಮೈಸೂರು ರಾಜ್ಯಕ್ಕೆ ಸೆರಿಸಲಾಯಿತು ನಂತರ ೧೯೭೨ ರಲ್ಲಿ ಮೈಸೂರು ಕರ್ನಾಟಕ ರಾಜ್ಯವಾದ ನಂತರ ಬೆಳಗಾವಿ ಕರ್ನಾಟಕದ ಭಾಗವಾಗಿ ಮುಂದುವರಿಯಿತು.

ಬೆಳಗಾವಿ ಜಿಲ್ಲೆಯಲ್ಲಿರುವ ಕಿತ್ತೂರು ಚಾರಿತ್ರಿಕವಾಗಿ ಪ್ರಸಿದ್ಧ. ಕಿತ್ತೂರಿನ  ರಾಣಿ ಚೆನ್ನಮ್ಮ, ಚರಿತ್ರೆಯಲ್ಲಿ ಸಾಹಸ ಮತ್ತು ಧೈರ್ಯದ ಪ್ರತೀಕವಾಗಿದ್ದಾಳೆ. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಬೆಳಗಾವಿಯ ಇನ್ನೊಬ್ಬ ಪ್ರಸಿದ್ಧ ವ್ಯಕ್ತಿಯೆಂದರೆ ಸಂಗೊಳ್ಳಿ ರಾಯಣ್ಣ. ಸ್ವಾಂತಂತ್ರ್ಯ ಪೂರ್ವ ಭಾರತದ ಇತಿಹಾಸದಲ್ಲು ಬೆಳಗಾವಿ ತನ್ನದೇ ಆದ ಪಾತ್ರವನ್ನ ಹೊಂದಿತ್ತು. ಡಿಸೆಂಬರ್ ೧೯೨೪ ರಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ೩೯ ನೇ ಭಾರತೀಯ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು.

ಭೌಗೋಳಿಕ ಲಕ್ಷಣಗಳು:
ಬೆಳಗಾವಿ ನಗರ ಸಮುದ್ರ ಮಟ್ಟದಿಂದ ೨೫೦೦ ಅಡಿ (೭೬೨ ಮೀ)ಎತ್ತರದಲ್ಲಿದೆ. ರಾಜಧಾನಿ ಬೆಂಗಳೂರಿನಿಂದ ೫೦೧ ಕಿಮೀ ದೂರದಲ್ಲಿ ವಾಯುವ್ಯ ದಿಕ್ಕಿನಲ್ಲಿ ನೆಲೆಸಿದ್ದು ಇತರ ನೆರೆ ರಾಜಧಾನಿಗಳಾದ ಮುಂಬಯಿನಿಂದ ದಕ್ಷಿಣಕ್ಕೆ ೫೫೦ ಕಿಮೀ ಹೈದರಾಬಾದನಿಂದ ಪಶ್ಛಿಮಕ್ಕೆ ೬೧೪ ಕಿಮೀ ಹಾಗು ಗೋವಾ ರಾಜಧಾನಿ ಪಣಜಿಯಿಂದ ೧೫೯ ಕಿಮೀ ದೂರದಲ್ಲಿದೆ. ಸಹ್ಯಾದ್ರಿಯ ಮಡಿಲಲ್ಲಿ ಹಾಗು ಸಮಿಪದ ಅರಬ್ಬಿ ಸಮುದ್ರದಿಂದ ಕೇವಲ ೧೦೦ ಕಿಮೀ ಗಳಷ್ಟು ದೂರದಲ್ಲಿ ನೆಲೆಸಿರುವ ಒಂದು ಸುಂದರ ನಗರ.

ಪ್ರತಿಕೂಲ ಹವಾಮಾನ, ಉತ್ತಮ ಮಳೆ, ಸಮೀಪದ ದಟ್ಟವಾದ ಅರಣ್ಯ ಜಿಲ್ಲೆಯ ಪ್ರಮುಖ ಲಕ್ಷಣಗಳು. ಕೃಷ್ಣ, ಘಟ್ಟಪ್ರಭೆ, ಮಲಪ್ರಭ, ಮಾರ್ಖಂಡೇಯ, ಹಿರಣ್ಯಕೇಶಿ, ದೂದಗಂಗೆ-ವೆದಗಂಗೆ ಜಿಲ್ಲೆಯ ಪ್ರಮುಖ ನದಿಗಳು. ರಾಕಸಕೊಪ್ಪ ಜಲಾಶಯ,ಹಿಡಕಲ್ ಜಲಾಶಯ ಹಾಗು ನವಿಲುತೀರ್ಥ ಜಲಾಶಯಗಳು ಜಿಲ್ಲೆಗೆ ಒಳಪಟ್ಟಿವೆ.

ಸಂಸ್ಕೃತಿ
ವೈವಿದ್ಯತೆಗಳಲ್ಲಿ ಏಕತೆಯನ್ನು ಹೊಂದಿರುವ ಭಾರತದಂತೆ ಬೆಳಗಾವಿ ಕೂಡ ಹಲವು ಭಾಷಿಕರ ಹಾಗು ಹಲವು ಧರ್ಮಿಯರ ನೆಲೆಬೀಡು. ಕನ್ನಡ (ಆಡಳಿತ ಭಾಷೆ), ಹಿಂದಿ(ಕೆಲವು ನಗರದಲ್ಲಿ), ಮರಾಠಿ(ಕೆಲವು ನಗರದಲ್ಲಿ) ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಷೇಶತೆ.ಇಲ್ಲಿನ ಇನ್ನೊಂದು ವಿ‍‍ಷೇಶವೆಂದರೆ ಜಾನಪದ ಕಲೆ. ಇಲ್ಲಿನ ಜನರು ವಿವಿಧ ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಜಾನಪದ ಕಲೆಗಳಾದ ಲಾವಣಿ ಪದ, ರಿವಾಯಿತ ಜಾನಪದ, ಬೀಸುಕಲ್ಲಿನ ಪದ, ಹಂತಿ ಪದ, ಇತ್ಯಾದಿ. ಈ ರೀತಿಯಾಗಿ ವಿವಿಧತೆಯಲ್ಲಿ ಏಕತೆಯನ್ನು ಜನರು ಹೊಂದಿದ್ದಾರೆ.

ಆರ್ಥಿಕತೆ, ಉದ್ಯಮಗಳು ಹಾಗು ವ್ಯಾಪಾರ:
ಬೆಳಗಾವಿ ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ. ತರಕಾರಿ, ಮೀನು, ಪೀಠೊಪಕರಣಗಳು, ಮರದ ದಿಮ್ಮೆಗಳು ಹಾಗು ಖನಿಜ ಅದಿರುಗಳಿಗೆ ಉತ್ತಮ ಮಾರುಕಟ್ಟೆ. ಬಾಕ್ಸೈಟ ಅದಿರು ಹೇರಳವಾಗಿ ದೊರುಕುವದರಿಂದ ಬೆಳಗಾವಿಯಲ್ಲಿ ಅಲ್ಯುಮಿನಿಯಂ ಉತ್ಪಾದನಾ ಕೈಗಾರಿಕೆಯೊಂದು (Hindalco Industries)ಭಾರಿ ಪ್ರಮಾಣದ ಅಲ್ಯುಮಿನಿಯಂ ಉತ್ಪಾದಿಸುತ್ತದೆ. ಇತ್ತಿಚಿನ ದಿನಗಳಲ್ಲಿ ಸಮೀಪದ ದೇಶನೂರ ಎಂಬಲ್ಲಿ ಯುರೇನಿಯಂ ಅದಿರು ಕೂಡ ದೊರೆತಿದೆ. ರಾಜಧಾನಿ ಬೆಂಗಳೂರಿನಂತೆ ಇಲ್ಲಿಯೂ ಐಟಿ ಉದ್ಯಮ (I T Industry) ಬೆಳೆಯುತ್ತಿದೆ. ಮೂಲತಹ ಬೆಳಗಾವಿಯಲ್ಲೆ ಆರಂಭಗೊಂಡು ವಿಶ್ವದಾದ್ಯಂತ ಸೇವೆ ಸಲ್ಲಿಸುತ್ತಿರುವ ಹಲವಾರು ಕಂಪೆನಿಗಳು ಇಲ್ಲಿವೆ ಹಾಗೂ ಬೆಳಗಾವಿಯಿಂದ ೬೦ ಕಿ.ಮಿ. ದೂರವಿರುವ ಗೋಕಾಕ್ ಫಾಲ್ಸ್ ದಲ್ಲಿ ಸುಮಾರು ೧೪೦ ವರುಷಗಳ ಹಳೆಯದಾದ್ದ ಜವಳಿ ಗಿರಣಿ ಇದೆ. ಹಾಗೂ ಇಲ್ಲಿ ಪಾಂಡವರು ಕಟ್ಟಿದ್ದಾರೆ ಎಂದು ನಂಬಲಪಡುವ ಶ್ರೀ ತಡಸಲ ಮಹಾಲಿಂಗೇಶ್ವರ ದೇವಸ್ತಾನ ಇದೆ.

ತಾಲೂಕುಗಳು
* ಬೆಳಗಾವಿ
* ಗೋಕಾಕ
* ಹುಕ್ಕೇರಿ
* ಬೈಲಹೊಂಗಲ
* ಸವದತ್ತಿ
* ರಾಮದುರ್ಗ
* ಅಥಣಿ
* ಚಿಕ್ಕೋಡಿ
* ರಾಯಬಾಗ್
* ಖಾನಾಪುರ
* ಕಿತ್ತೂರು

ಪ್ರೇಕ್ಷಣೀಯ ಸ್ಥಳಗಳು ಮತ್ತು ಆಕರ್ಷಣೆಗಳು
* ಹಳೆಯ ಕಲ್ಲಿನ ಕೋಟೆ (೧೫೧೯ ರಲ್ಲಿ ಕಟ್ಟಿದ್ದೆಂದು ನಂಬಲಾಗಿದೆ)
* ಕೋಟೆ ಕೆರೆ
* ವೀರ ಸೌಧ
* ಕಮಲ ಬಸದಿ
* ಸ್ವಾಮಿ ವಿವೇಕಾನಂದ ಆಶ್ರಮ
* ಕಪಿಲೇಶ್ವರ ದೇವಸ್ಥಾನ
* ಹಿಡಕಲ್ ಜಲಾಶಯ
* ಮುನವಳ್ಳಿಯ ನವಿಲುತೀರ್ಥ ಜಲಾಶಯ
* ಮೂಡಲ್ಗಿಯ ಕಬ್ಬು ಮಾರುಕಟ್ಟೆ
* ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ತಾನ
* ಗೋಕಾಕ್ ಜಲಪಾತ - ಘಟಪ್ರಭಾ ನದಿಯ ಜಲಪಾತ , ಗೊಡಚಿನಮಲ್ಕಿ ಜಲಪಾತ

loading...