ಗ್ರಾಮ ಪಂಚಾಯಿತಿಯು ಚಲಾಯಿಸಬಹುದಾದ ಅಧಿಕಾರಗಳು

Published on:  2016-10-16
Posted by:  Admin

ಗ್ರಾಮ ಪಂಚಾಯಿತಿಯು ಚಲಾಯಿಸಬಹುದಾದ ಅಧಿಕಾರಗಳು ಮತ್ತು ನೆರವೇರಿಸಬೇಕಾದ ಕಾರ್ಯಗಳು ಕೆಳಗಿನಂತಿವೆ :

* ಗ್ರಾಮ ಪಂಚಾಯಿತಿಯು ತಯಾರಿಸಿದ ವಾರ್ಷಿಕ ಯೋಜನೆಗಳನ್ನು ಪರಿಗಣಿಸುವುದು ಮತ್ತು ಅನುಮೋದಿಸುವುದು.

* ಗ್ರಾಮ ಪಂಚಾಯಿತಿಯ ಮೂಲಕ ವಾರ್ಡ್ ಸಭೆಗಳ ಶಿಫಾರಸುಗಳು ಮತ್ತು ಸಲಹೆಗಳನ್ನು ಪಡೆದುಕೊಂಡು ಮತ್ತು ಪರಿಗಣಿಸಿದ ತರುವಾಯ, ಜಿಲ್ಲಾ ಪಂಚಾಯತಿಯ ಅಥವಾ ತಾಲೂಕು ಪಂಚಾಯಿತಿಯ ಮೂಲಕ ಪಂಚಾಯಿತಿ ಪ್ರದೇಶದಲ್ಲಿ ಅನುಷ್ಟಾನಗೊಳಿಸಬೇಕಾದ ಯೋಜನೆಗಳ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಸ್ತಾವಗಳನ್ನು ಸ್ರಜಿಸುವುದು ಮತ್ತು ಅವುಗಳ ಆದ್ಯತೆಯನ್ನು ನಿರ್ಧರಿಸುವುದು.

* ಗ್ರಾಮ ಪಂಚಾಯಿತಿಯು ತಾಲ್ಲೂಕು ಪಂಚಾಯಿತಿಯು , ಜಿಲ್ಲಾ ಪಂಚಾಯಿತಿಯು ಅಥವಾ ಸರ್ಕಾರವು ನಿಗಧಿಪಡಿಸಿದ ಮಾನದಂಡಗಳ ಆಧಾರದಮೇಲೆ ಫಲಾನುಭವಿ ಆಧಾರಿತ ಯೋಜನೆಗಳಿಗಾಗಿ ಪಂಚಾಯಿತಿ  ಪ್ರದೇಶದಿಂದ ಅತ್ಯಂತ ಅರ್ಹ  ವ್ಯಕ್ತಿಗಳನ್ನು ಗುರಿತಿಸುವುದು ಮತ್ತು ವಾರ್ಡ್ ಸಭೆಗಳು ಕಳುಹಿಸಿದ ವೈಯಕ್ತಿಕ ಫಲಾನುಭವಿಗಳ ಆದ್ಯತಾ ಪಟ್ಟಿಯನ್ನು ಪರಿಗಣಿಸಿದ ತರುವಾಯ ಆದ್ಯತಾ ಕ್ರಮಕ್ಕನುಸಾರವಾಗಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಬಹುದು. ಸಂಬಂಧಪಟ್ಟ ಗ್ರಾಮ ಪಂಚಾಯಿತಿ , ತಾಲ್ಲೂಕು ಪಂಚಾಯಿತಿ , ಜಿಲ್ಲಾ ಪಂಚಾಯಿತಿ ಅಥವಾ ಸಂದರ್ಭನುಸಾರ ಸರ್ಕಾರವು ಅಂತಹ ಪಟ್ಟಿಗೆ ಬದ್ದವಾಗಿರತಕ್ಕದ್ದು.

* ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪ್ರಸಾರ ಮಾಡುವುದು ಮತ್ತು ಸ್ಥಳೀಯವಾಗಿ ಲಭ್ಯವಿರುವ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವಲ್ಲಿ ನೆರವು ನೀಡುವುದು. ಹಾಗು ಇವುಗಳ ನಿರ್ವಹಣೆಯ ಸಂಬಂಧದಲ್ಲಿ ಮಾಹಿತಿ ಒದಗಿಸುವುದು

* ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದಕ್ಕಾಗಿ ಅಗತ್ಯವಾದ ವಿವರಗಳನ್ನು ಸಂಗ್ರಹಿಸುವಲ್ಲಿ ಮತ್ತು ಕ್ರೂಡೀಕರಿಸುವಲ್ಲಿ ಸಾಮಾಜಿಕ , ಆರ್ಥಿಕ ಅಂಕಿ ಅಂಶಗಳನ್ನು ಸಂಗ್ರಹಿಸುವಲ್ಲಿ ಮತ್ತು ಅರೋಗ್ಯ , ಸಾಕ್ಷರತೆ ಮತ್ತು ಅದೇ ಬಗೆಯ ಅಭಿವೃದ್ಧಿ ಆಂದೋಲನೆಯಲ್ಲಿ ಭಾಗವಹಿಸುವಂತೆ ಪ್ರಚಾರ ಮಾಡುವಲ್ಲಿ ಗ್ರಾಮ ಪಂಚಾಯಿತಿಗೆ ನೆರವು ನೀಡುವುದು .

* ಗ್ರಾಮಸಭೆಯ ಸಭೆಯ ತರುವಾಯ ಮುಂದಿನ ಆರು ತಿಂಗಳುಗಳ ಅವಧಿಯಲ್ಲಿ, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸಲ್ಲಿಸಬೇಕಾದ ಸೇವೆಗೆ ಮತ್ತು ಅವರು ಮಾಡಲು ಉದ್ದೇಶಿಸಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅವರಿಂದ ಮಾಹಿತಿಯನ್ನು ಪಡೆಯುವುದು.

* ಪಂಚಾಯಿತಿ ಪ್ರದೇಶಕ್ಕೆ ಸಂಬಂದಿಸಿದಂತೆ ಗ್ರಾಮ ಪಂಚಾಯಿತಿಯ ಪ್ರತಿಯೊಂದು ತೀರ್ಮಾನವು ಎಷ್ಟು ವಿವೇಚನಾಯುತವಾಗಿದೆಯೆಂಬ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡೆಯುವುದು

* ಗ್ರಾಮ ಸಭೆಯ ತೀರ್ಮಾನದ ಮೇಲೆ ಕೈಗೊಂಡ ಅನುಸರಣಾ ಕ್ರಮದ ಬಗ್ಗೆ ಪಂಚಾಯತಿಯಿಂದ ಮಾಹಿತಿ ಪಡೆಯುವುದು.

* ಅಭಿವೃದ್ಧಿ ಕಾಮಗಾರಿಗಳಿಗೆ , ಸ್ವಯಂ ಸೇವಾ ಕಾರ್ಮಿಕರನ್ನು ಮತ್ತು ಹಣದ ರೂಪದಲ್ಲಿ ಮತ್ತು ವಸ್ತು ರೂಪದಲ್ಲಿ ವಂತಿಗೆಗಳನ್ನು ಒದಗಿಸುವುದು ಮತ್ತು ಸಂಗ್ರಹಿಸುವುದು ಮತ್ತು ಸ್ವಯಂ ಸೇವಾ ತಂಡಗಳ ಮೂಲಕ ಅಂತಹ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವುದು

* ಗ್ರಾಮ ಪಂಚಾಯಿತಿಗೆ ತೆರಿಗೆಗಳನ್ನು ಸಂದಾಯ ಮಾಡುವಂತೆ ಮತ್ತು ಸಾಲಗಳನ್ನು ಮರು ಸಂದಾಯ ಮಾಡುವಂತೆ , ಗ್ರಾಮ ಸಭೆಯ ಸದಸ್ಯರನ್ನು ಮನವೊಲಿಸಲು ಪ್ರಯತ್ನಿಸುವುದು.

* ವಾರ್ಡ್ ಸಭೆಗಳ ಸಲಹೆಗಳನ್ನು ಪರಿಗಣಿಸಿದ ತರುವಾಯ , ಬೀದಿ ದೀಪಗಳು , ಬೀದಿ ಅಥವಾ ಸಮುದಾಯ ನೀರಿನ ನಲ್ಲಿಗಳು , ಸಾರ್ವಜನಿಕ ಬಾವಿಗಳು , ಸಾರ್ವಜನಿಕ ನೈರ್ಮಲ್ಯ ಘಟಕಗಳು , ನೀರಾವರಿ ಸೌಲಭ್ಯಗಳು ಮತ್ತು ಅಂಥ ಇತರ ಸಾರ್ವಜನಿಕ ಸೌಕರ್ಯ ಯೋಜನೆಗಳಿಗಾಗಿ ಸ್ಥಳವನ್ನು ನಿರ್ಣಯಿಸುವುದು ಹಾಗು ಅವುಗಳ್ಳಲ್ಲಿಯ ಕೊರತೆಗಳನ್ನು ಗುರುತಿಸುವುದು ಮತ್ತು ವಾರ್ಡ್ ಸಭೆಗಳ ಸಲಹೆಗಳನ್ನು ಪರಿಗಣಿಸಿದ ತರುವಾಯ ಪರಿಹಾರ ಕ್ರಮಗಳನ್ನು ಸಲಹೆ ಮಾಡುವುದು ಹಾಗು ಕಾಮಗಾರಿಗಳನ್ನು ತೃಪ್ತಿಕರವಾಗಿ ನಿರ್ವಹಿಸಲಾಗಿದೆ ಎಂದು ವರದಿ ನೀಡುವುದು.

* ಸ್ವಚ್ಛತೆ , ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿವಾರಣೆಯಂತಹ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಅರಿವು ಮೂಡಿಸುವುದು .

* ಪಂಚಾಯಿತಿ ಪ್ರದೇಶದಲ್ಲಿ ವಯಸ್ಕ ಶಿಕ್ಷಣ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವುದು .

* ಪಂಚಾಯಿತಿ ಪ್ರದೇಶದಲ್ಲಿಯ ಶಾಲಾ ಪುರೋಭಿವೃದ್ದಿ ಸಂಘಗಳ ಅಂಗನವಾಡಿ , ಮಹಿಳಾ ಸಮಾಜ, ಯುವಕ ಹಾಗು ಯುವತಿ ಮಂಡಳಿ ಸ್ವಸಹಾಯ ಗುಂಪು , ಹಾಗು ಸ್ತ್ರೀಶಕ್ತಿ ಚಟುವಟಿಕೆಗಳಿಗೆ ನೆರವು ನೀಡುವುದು.

* ವಿಶೇಷವಾಗಿ ರೋಗ ಪ್ರತಿಭಂದ ಮತ್ತು ಕುಟುಂಬ ಕಲ್ಯಾಣ , ಜನಸಂಖ್ಯೆ ನಿಯಂತ್ರಣದ ಹಾಗು ಜಾನುವಾರು ರೋಗ ನಿಯಂತ್ರಣದ ವಿಷಯದಲ್ಲಿ ಪಂಚಾಯಿತಿ ಪ್ರದೇಶದಲ್ಲಿಯ ಸಾರ್ವಜನಿಕ ಅರೋಗ್ಯ ಕೇಂದ್ರಗಳ ಚಟುವಟಿಕೆಗಳಿಗೆ ನೆರವು ನೀಡುವುದು ಮತ್ತು ಸಾಂಕ್ರಾಮಿಕ ರೋಗಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಿದ ಬಗ್ಗೆ ಕೂಡಲೇ ವರದಿ ಮಾಡಲು ವ್ಯವಸ್ಥೆ ಮಾಡುವುದು .

* ಪಂಚಾಯಿತಿ ಪ್ರದೇಶದಲ್ಲಿಯ ಜನರ ವಿವಿಧ ಸಮೂಹಗಳ ನಡುವೆ ಕೋಮು ಸೌಹಾರ್ದತೆ ಮತ್ತು ಐಕ್ಯತೆಯನ್ನು ಬೆಳೆಸುವುದು ಮತ್ತು ಸ್ಥಳೀಯ ಜನರ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಲು ಸಾಂಸ್ಕ್ರತಿಕ ಉತ್ಸವಗಳು , ಸಾಹಿತ್ಯ ಚಟುವಟಿಕೆಗಳು ಮತ್ತು ಕ್ರೀಡಾಕೂಟಗಳನ್ನು ವ್ಯವಸ್ಥೆಗೊಳಿಸುವುದು.

* ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಆಸ್ತಿಗಳಾದ ಗೋಮಾಳ , ಕೆರೆ , ಕೆರೆಯಂಗಳ , ಅಂತರ್ಜಲ , ದನಕರುಗಳು ಮೇಯುವ ಜಾಗ , ಗಣಿ ಇತ್ಯಾದಿಗಳನ್ನು ಸಂರಕ್ಷಿಸುವುದು ಹಾಗು ನಿರ್ವಹಿಸುವುದು.

* ಜಾತಿ , ಮತ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಅಥವಾ ಭೇದಭಾವ ಮಾಡದಂತೆ ಕ್ರಮ ಕೈಗೊಳ್ಳುವುದು ಹಾಗು ಮದ್ಯಪಾನದಂಗಡಿಗಳಿಗೆ , ಮಾದಕ ದ್ರವ್ಯ ಮಾರುವ ಅಂಗಡಿಗಳಿಗೆ ಹಾಗು ಜೂಜಾಟದ ಅಂಗಡಿಗಳಿಗೆ ಅಥವಾ ಸಾರ್ವಜನಿಕ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡುವಂತಹ ಯಾವುದೇ ಚಟುವಟಿಕೆಗಳಿಗೆ ಲೈಸೆನ್ಸ್ ನೀಡದಿರುವಂತೆ ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡುವುದು .

* ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಇರಬಹುದಾದ ಬಾಲ ಕಾರ್ಮಿಕರನ್ನು ಗುರ್ತಿಸುವುದು ಹಾಗು ಅವರ ಪುನರ್ವಸತಿಗಾಗಿ ಕ್ರಮ ಕೈಗೊಳ್ಳುವುದು . ಹಾಗು ಸಂಬಂಧದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ನಿಗಧಿಪಡಿಸಿರುವ ಕಾನೂನು ಕ್ರಮಗಳನ್ನು ಅನುಷ್ಟಾನಗೊಳಿಸಲು ಸಹಾಯ ನೀಡುವುದು ಮತ್ತು, ನಿಯಮಿಸಬಹುದಾದಂತೆ ಅಂತಹ ಇತರ ಅಧಿಕಾರಗಳನ್ನು ಚಲಾಯಿಸುವುದು ಅಥವಾ ಅಂತಹ ಇತರ ಪ್ರಕಾರ್ಯಗಳನ್ನು ನೆರವೇರಿಸುವುದು .

loading...